ಮಂಗಳೂರು: ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭವಾಗಿದೆ.
ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದು, ಸಿಎಸ್ ವಿ ಇನ್ಸ್ ಪೆಕ್ಟರ್ ಸೇರಿದಂತೆ ಐವರು ಸಿಬ್ಬಂದಿಯೊಂದಿಗೆ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಿಸಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಯಾವುದೇ ರೀತಿಯ ದ್ವೇಷ ಭಾಷಣ ಇತರ ಕೋಮು ಸೂಕ್ಷ್ಮ ವಿಚಾರ, ಕೋಮು ಸೂಕ್ಷ್ಮ ಕೊಲೆ, ದನ ಕಳವು, ನೈತಿಕ ಪೊಲೀಸ್ ಗಿರಿ ಮೇಲೆ ಈ ವಿಂಗ್ ನಿಗಾ ಇಡಲಿದೆ.
ಯಾವುದೇ ವಿಚಾರದ ಬಗ್ಗೆ ಎಸಿಪಿ ಸಿಸಿಬಿ ಕಮಿಷನರ್ ಗೆ ಮಾಹಿತಿ ನೀಡಲಿದ್ದಾರೆ. ಕಳೆದ ಎರಡು ದಿನಗಳಿಂದ ಈ ವಿಂಗ್ ಕಾರ್ಯಾಚರಣೆ ಮಾಡುತ್ತಾ ಇದ್ದು, ತಂಡದಲ್ಲಿ ಐದರಿಂದ ಆರು ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೋಮು ಆಧಾರಿತ ನೈತಿಕ ಪೊಲೀಸ್ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಈ ಹಿಂದೆ ಸ್ವತಃ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದರು. ಮಂಗಳೂರು ಭೇಟಿ ವೇಳೆ ಮಾತನಾಡಿದ್ದ ಪರಮೇಶ್ವರ್, ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೂತನ ಪಡೆಯಾದ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸುವ ಅಗತ್ಯವಿದೆ ಎಂದಿದ್ದರು.