Home ಕರಾವಳಿ ಮಂಗಳೂರು: ಆ.13ರಿಂದ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜಾರೋಹಣಕ್ಕೆ ಸೂಚನೆ

ಮಂಗಳೂರು: ಆ.13ರಿಂದ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜಾರೋಹಣಕ್ಕೆ ಸೂಚನೆ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಇದೇ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸಂಬಂಧಿಸಿದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.

ಅವರು ಆ.1ರ ಸೋಮವಾರ ನಗರದ ಜಿಲ್ಲಾ ಪಂಚಾಯತ್‍ ನ ನೇತ್ರಾವತಿ ಸಭಾಂಗಣದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಹಾಗೂ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದರು.

2002ರ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದೆ, ಅದರಂತೆ ಆಗಸ್ಟ್ 13 ರಿಂದ 15 ರವರೆಗೆ ಜಿಲ್ಲೆಯ ಪ್ರತಿಯೊಂದು ಮನೆಯ ಮೇಲೆ ಹಾಗೂ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು, ಹಗಲಿನಂತೆಯೇ ರಾತ್ರಿಯಲ್ಲೂ ಧ್ವಜ ಆರೋಹಣಕ್ಕೆ ವಿನಾಯಿತಿ ನೀಡಲಾಗಿದೆ, ಆದಕಾರಣ ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯಗಳೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅವುಗಳ ಉಪ ಕೇಂದ್ರಗಳು, ಕೃಷಿ ಕೇಂದ್ರಗಳು, ಪಶು ವೈದ್ಯಕೀಯ ಆಸ್ಪತ್ರೆಗಳು ಸೇರಿದಂತೆ ಗ್ರಾಮ ಮಟ್ಟದಲ್ಲಿರುವ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಪ್ರೇಮ ಮೆರೆಯುವಂತೆ ಅವರು ತಿಳಿಸಿದರು.

ಧ್ವಜಗಳನ್ನು ಖರೀದಿಸಿ, ಗ್ರಾಮ ಮಟ್ಟದಲ್ಲಿ ಅವುಗಳ ಉಚಿತವಾಗಿ ಸರಬರಾಜು ಮಾಡುವಂತೆ ಗ್ರಾಮ ಪಂಚಾಯತ್‍ ಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ, ಅದರಂತೆ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಧ್ವಜಗಳನ್ನು ಪಡೆದುಕೊಳ್ಳಬೇಕು 3.28 ಲಕ್ಷ ಕ್ಕೂ ಹೆಚ್ಚಿನ ರಾಷ್ಟ್ರಧ್ವಜಗಳು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಪೂರೈಸಬೇಕಾಗಿದ್ದು, 1.25 ಲಕ್ಷ ದ್ವಜಗಳು ಕೇಂದ್ರ ಸರ್ಕಾರದಿಂದ ನೇರವಾಗಿ ಹಂಚಿಕೆಯಾಗಿದೆ, ಅದನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಸಭೆ ನಡೆಸಿ ಹಂಚುವ ಬಗ್ಗೆ ಸೂಚನೆ ನೀಡಲಿದ್ದಾರೆ, 20*30 ಇಂಚು ಅಳತೆಯ ಧ್ವಜಕ್ಕೆ ಕೇಂದ್ರ ಸರ್ಕಾರ 22 ರೂಪಾಯಿಗಳನ್ನು ನಿಗದಿ ಪಡಿಸಿದೆ, ಮಾರಾಟದಿಂದ ಬಂದ ಹಣವನ್ನು ತಮ್ಮ ಹಂತದಲ್ಲಿಯೇ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿ, ಖರೀದಿ ಪ್ರಕ್ರಿಯೇ ಪೂರ್ಣಗೊಂಡ ನಂತರ ಮೊತ್ತವನ್ನು ಸಂಬಂಧಿಸಿದವರಿಗೆ ಪಾವತಿಸಬೇಕು ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯತ್ ವತಿಯಿಂದ 1.50 ಲಕ್ಷ ರಾಷ್ಟ್ರಧ್ವಜಗಳನ್ನು ಎನ್.ಆರ್.ಎಲ್.ಎಂ ಮೂಲಕ ಹೊಲಿದು ಕೊಡಲು ಆದೇಶ ನೀಡಲಾಗಿದೆ, ಧ್ವಜ ಸಂಹಿತೆ ತಿದ್ದುಪಡಿಯಂತೆ ಪಾಲಿಸ್ಟಾರ್, ರೇಷ್ಮೆ, ಉಣ್ಣೆ ಹಾಗೂ ಹತ್ತಿಯಿಂದ ಧ್ವಜವನ್ನು ಹೊಲಿಯಬಹುದಾಗಿರುತ್ತದೆ, 20*30 ಇಂಚಿನ ಪಾಲಿಸ್ಟರ್ ಅಳತೆಯ ಧ್ವಜಕ್ಕೆ 40ರೂ. ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುರಿತು ಜಾಗೃತಿ ಮೂಡಿಸಲು ಜಾಥಾಗಳು, ಪ್ರಬಂಧ, ಚರ್ಚಾ ಸ್ಪರ್ಧೆ, ರಂಗೋಲಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಅವರು ಸೂಚನೆ ನೀಡಿದರು.

 ರಾಷ್ಟ್ರಧ್ವಜವನ್ನು ಮನೆ ಅಥವಾ ಕಟ್ಟಡದ ಮೇಲ್ಭಾಗದಲ್ಲಿ ಕಟ್ಟಬೇಕು, ಧ್ವಜ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟವರು ಈ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು, ಆಗಸ್ಟ್ 15ರ ನಂತರ ರಾಷ್ಟ್ರಧ್ವಜವನ್ನು, ಇಳಿಸಿ ಕ್ರಮವಾಗಿ ಮಡಚಿ, ಸುರಕ್ಷಿತವಾಗಿಡಬೇಕು ಎಂದು ತಿಳಿಸಿದ ಅವರು, ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಬೇಕು, ಸ್ವಚ್ಛ ವಾಹಿನಿ ವಾಹನಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವಂತೆ ಅವರು ತಿಳಿಸಿದರು.

15ರಂದು ಸಡಗರ, ಸಂಭ್ರಮದ ಸ್ವಾತಂತ್ರ್ಯೋತ್ಸವ:

ಇದೇ ಆಗಸ್ಟ್ 15ರ ಸೋಮವಾರ ಸ್ವಾತಂತ್ರ್ಯದ ಅಮೃತೋತ್ಸವವನ್ನು ಜಿಲ್ಲೆಯಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಭಾವೈಕ್ಯತೆ, ರಾಷ್ಟ್ರಾಭಿಮಾನ ಹಾಗೂ ಅಖಂಡತೆಯನ್ನು ಪ್ರದರ್ಶಿಸಬೇಕು, ಅದಕ್ಕಾಗಿ ಬಹಳ ಪರಿಣಾಮಕಾರಿಯಾಗಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಅಧಿಕಾರಿಗಳ ಸಹಕಾರ ಅಗತ್ಯವಿದೆ, ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತೆ ಅವರು ಸೂಚಿಸಿದರು.

ಅಂದು ಬೆಳಿಗ್ಗೆ 9 ಗಂಟೆಗೆ ನಗರದ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಲಿದ್ದಾರೆ. ಈ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸಬೇಕು, ಅಂದು ಬೆಳಿಗ್ಗೆ 11 ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು, ಮುಖ್ಯವಾಗಿ ಸರ್ಕಾರದ ಎಲ್ಲಾ ಕಚೇರಿಗಳಲ್ಲೂ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರವನ್ನು ಮಾಡಿಸುವಂತೆ ಅವರು ತಿಳಿಸಿದರು.

 ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ವೇದಿಕೆಯಲ್ಲಿದ್ದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Join Whatsapp
Exit mobile version