Home ಕರಾವಳಿ ಮಂಗಳೂರು: ನಿಷೇಧಿತ MDMA, ಗಾಂಜಾ, ಅಂಬರ್- ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಆರೋಪಿಗಳ ಸೆರೆ

ಮಂಗಳೂರು: ನಿಷೇಧಿತ MDMA, ಗಾಂಜಾ, ಅಂಬರ್- ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಆರೋಪಿಗಳ ಸೆರೆ

ಮಂಗಳೂರು: ಮಾದಕ ವಸ್ತುಗಳಾದ MDMA, ಗಾಂಜಾ, ಅಂಬರ್- ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಆರೋಪಿಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೇರಳ-ಕರ್ನಾಟಕದ ಗಡಿಭಾಗದಲ್ಲಿ MDMA ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿರುತ್ತಾರೆ.

ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ವನ್ನು ಕೇರಳದ ಗಡಿಭಾಗ ಹಾಗೂ ಮುಡಿಪು ಪರಿಸರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಮುಡಿಪು ಪಂಚಾಯತ್ ಮೈದಾನ ಪರಿಸರದಲ್ಲಿ ಬೈಕ್ ನಲ್ಲಿ ಬಂದು ನಿಷೇದಿತ ಮಾದಕ ವಸ್ತು MDMA ನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮುಡಿಪು ನಿವಾಸಿ ನವಾಝ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ

ನಗರದ ಫ್ಲಾಟ್ ವೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಸಾಗರೋತ್ತರ ಭಾರತೀಯ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ.

ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲಾಟ್ ವೊಂದರಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ಸಿಸಿಬಿ ಪೊಲೀಸರು ಗಾಂಜಾವನ್ನು ಹೊಂದಿದ ಫ್ಲಾಟಿಗೆ ದಾಳಿ ನಡೆಸಿ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿ ಸೆರೆ

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಾರುತಿ ಅಲ್ಟೋ 800 ಕಾರಿನಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 27.100 ಕೆ ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ: 27-12-2022 ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಾರುತಿ ಅಲ್ಟೋ 800 ಕಾರಿನಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ  ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ರಾಜೇಂದ್ರ ಬಿ ನೇತೃತ್ವದ ಸಿಸಿಬಿ ಪೊಲೀಸರು ನೀರುಮಾರ್ಗದ ಕುಟ್ಟಿಕಳ ಎಂಬಲ್ಲಿ ಪತ್ತೆ ಹಚ್ಚಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಕಿರಣ್ ರಾಜ್ ಶೆಟ್ಟಿ, ಎಂಬಾತನನ್ನು ಬಂಧಿಸಿದ್ದಾರೆ.

ಕೋಟ್ಯಾಂತರ ಮೌಲ್ಯದ ಅಂಬರ್- ಗ್ರೀಸ್ ಮಾರಾಟಕ್ಕೆ  ಯತ್ನಿಸಿದ ಇಬ್ಬರ ಸೆರೆ

ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ಬೆಲೆಬಾಳುವ ಆಂಬರ್-ಗ್ರೀಸ್(ತಿಮಿಂಗಿಲ ವಾಂತಿ) ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿ ಕೋಟ್ಯಾಂತರ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರದ ಲಾಲ್ ಭಾಗ್ ನ ಕರಾವಳಿ ಮೈದಾನ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ ಅಂಬರ್-ಗ್ರೀಸ್(ತಿಮಿಂಗಿಲ ವಾಂತಿ) ನ್ನು ವಶದಲ್ಲಿಟ್ಟು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಗುರುವಾಯನಕೆರೆಯ ನಿಮಿತ್, ಪುಂಜಾಲಕಟ್ಟೆಯ ಯೋಗೀಶ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ಅಪರೂಪದ ಹಾಗೂ ಕೋಟ್ಯಾಂತರ ರೂಪಾಯಿ ಬೆಲೆಬಾಳುವ 3.2 ಕೆಜಿ ತೂಕದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ) ನ್ನು  ಹಾಗೂ 2 ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದಕ್ಕೆ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3.2 ಕೋಟಿ ಮೌಲ್ಯವಿರುತ್ತದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Join Whatsapp
Exit mobile version