ಮಂಗಳೂರು: ಮೂಡಬಿದ್ರಿಯ ಯುವತಿಯೊಬ್ಬಳನ್ನು ಮದುವೆಯಾಗುವ ಅಮಿಷವೊಡ್ಡಿ ಅತ್ಯಾಚಾರ ನಡೆಸಿ ಆಕೆಯಿಂದ ಹಣವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಯನ್ನು ಉಳ್ಳಾಲ ನಿವಾಸಿ ಶಾನ್ ನವಾಸ್(36) ಎಂದು ಗುರುತಿಸಲಾಗಿದೆ.
ಆರೋಪಿ ಶಾನ್ ನವಾಸ್ ಮೂಡಬಿದ್ರಿ ನಿವಾಸಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಹಣವನ್ನು ಸುಲಿಗೆ ಮಾಡಿದ್ದ, ಅಲ್ಲದೇ ಆಕೆಗೆ ಮಾದಕ ವಸ್ತುಗಳನ್ನು ಬಲವಂತವಾಗಿ ಸೇವಿಸುವಂತೆ ಮಾಡಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ನಂತರ ಹಣವನ್ನು ನೀಡುವಂತೆ ಬೆದರಿಸಿ ಒಂದೂವರೆ ಲಕ್ಷ ರೂ. ಸುಲಿಗೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ವಿವಿಧ ಕಡೆಗಳಲ್ಲಿನ ಲಾಡ್ಜ್ ಗಳಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆಂದು ಸಂತ್ರಸ್ತೆ ಯುವತಿ ನೀಡಿದ ದೂರು ನೀಡಿದ್ದು, ಅದರಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಮಂಗಳೂರು ನಗರ ಅಪರಾಧ ವಿಭಾಗ(ಸಿಸಿಬಿ) ಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಶಾನ್ ನವಾಸ್ ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.