Home ಕರಾವಳಿ ಮಂಗಳೂರು : ದಲಿತ ಸಮುದಾಯದ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ಯುವಕರು

ಮಂಗಳೂರು : ದಲಿತ ಸಮುದಾಯದ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ಯುವಕರು

ಮಂಗಳೂರು : ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಯೊಬ್ಬರಿಗೆ ಪುತ್ತೂರಿನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಕ್ರೌರ್ಯ ಮೆರೆದ ಪ್ರಕರಣ ದಲಿತ ಸಂಘಟನೆ ಪತ್ರಿಕಾಗೋಷ್ಟಿ ವೇಳೆ ಬೆಳಕಿಗೆ ಬಂದಿದೆ. ಪುತ್ತೂರು ಬಪ್ಪಳಿಗೆ ಟೆಲಿಕಾಂ ವಸತಿಗೃಹದಲ್ಲಿ ವಾಸ್ತವ್ಯ ಹೊಂದಿರುವ ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಗಂಗಾಧರ್ ಹಲ್ಲೆ ಮತ್ತು ಜಾತಿ ನಿಂದನೆ ದೂರು ನೀಡಿದ್ದಾರೆ.

ಎ.ಎಸ್.ಐ ಗಂಗಾಧರ್ ಅವರು ಜ.4 ರಂದು ಕರ್ತವ್ಯ ಮುಗಿಸಿ ಮನೆಗೆ ಹೋಗಲೆಂದು ಪುತ್ತೂರಿಗೆ ಬಂದು ಮನೆಗೆ ಬೇಕಾದ ಸಾಮಾಗ್ರಿ ಖರೀದಿಸಿ, ನಂತರ ಮನೆಯಲ್ಲಿ ಸಂಬಂಧಿಕರಿಗೆ ಮದ್ಯ ಖರೀದಿಸಲು ವೈನ್ ಶಾಪ್‌ಗೆ ಹೋಗಿದ್ದ ವೇಳೆ ಮದ್ಯದಂಗಡಿಯಲ್ಲಿದ್ದ ಪ್ರಸಾದ್ ಮತ್ತು ಪವನ್ ಎಂಬವರು ನೆಹರುನಗರದ ಕೇಶವ ಎಂಬವರಿಗೆ ಹಲ್ಲೆ ನಡೆಸಿರುವ ಕುರಿತು ವಿಚಾರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಪ್ರಸಾದ್ ಮತ್ತು ಪವನ್ ಅವರು ಎ.ಎಸ್.ಐ ಗಂಗಾಧರ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಗಾಯಗೊಂಡ ಗಂಗಾಧರ್ ಅವರು ಆಸ್ಪತ್ರೆಗೆ ಹೋಗಲೆಂದು ವಾಹನದ ಬಳಿ ಬಂದಾಗ ಅಲ್ಲಿಗೆ ಬಂದ ಇನ್ನೋರ್ವ ಪರಿಚಯದ ಅಜಯ್ ಎಂಬವರು ವಿಡಿಯೋ ಮಾಡುವುದನ್ನು ನೋಡಿ ಪ್ರಶ್ನಿಸಿದಾಗ ಅಲ್ಲೂ ಅಜಯ್ ಎಂಬವರು ಜಾತಿ ನಿಂಧನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಜ.4 ರಂದು ಗಂಗಾಧರ್ ಅವರು ಪುತ್ತೂರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದೀಗ ಘಟನೆ ಬೆಳಕಿಗೆ ಬಂದಿದೆ.

ದಲಿತ ಸಂಘಟನೆ ಮೂಲಕ ಪ್ರಕರಣ ಬೆಳಕಿಗೆ:

ದಲಿತ ಸಂಘಟನೆಗಳು ಎ.ಎಸ್.ಐ ಅವರಿಗೆ ಹಲ್ಲೆ ಮತ್ತು ಜಾತಿ ನಿಂಧನೆ ಮಾಡಿದ ಪ್ರಕರಣಕ್ಕೆ ವಾರ ಕಳೆದು ಇನ್ನೂ ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮಾಡಿಲ್ಲ ಎಂದು ಆರೋಪಿಸಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ದೂರು ನೀಡಿ 10 ದಿನಗಳು ಕಳೆದರೂ ಆರೋಪಿಗಳನ್ನು ವಿಚಾರಣೆ ನಡೆಸಿಲ್ಲ. ದಲಿತರಿಗೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿದರೆ ಮಾತ್ರ ಕಾನೂನು ಕ್ರಮ ಎನ್ನುವ ಸ್ಥಿತಿ ನಿರ್ಮಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಿ ದಲಿತರ ಮೇಲೆ ನಡೆಯುವ ದೌರ್ಜನ್ಯಕ್ಕೆ ಪ್ರತಿಭಟನೆಗೆ ಕಾಯದೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಸೇಸಪ್ಪ ಬೆದ್ರಕಾಡು ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version