Home ಕರಾವಳಿ ಮಂಗಳೂರು: ಏಪ್ರಿಲ್ 1ರಿಂದ 30ರವರೆಗೆ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ

ಮಂಗಳೂರು: ಏಪ್ರಿಲ್ 1ರಿಂದ 30ರವರೆಗೆ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ

ಮಂಗಳೂರು: ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಪ್ರಿಲ್ 1ರಿಂದ 30ರವರೆಗೆ ಹಮ್ಮಿಕೊಳ್ಳಲಾಗಿದೆ‌ ಎಂದು ಜಿಲ್ಲಾ ಪಶುಪಾಲನ ಇಲಾಖೆಯ ಮುಖ್ಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಬಾರಿಯಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೆ.ಎಂ.ಎಫ್.ನ ಲಸಿಕೆದಾರರು ಪ್ರತೀ ಮನೆ ಮನೆಗೆ ತೆರಳಿ ರೈತರ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ.

ಕಾಲು ಬಾಯಿ ಜ್ವರ ರೋಗವು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಲಸಿಕೆ ನೀಡುವುದೊಂದೇ ಪರಿಣಾಮಕಾರಿಯಾದ ವಿಧಾನವಾಗಿದೆ. ಈ ಹಿಂದೆ ರೈತರು ತಮ್ಮ ಜಾನುವಾರುಗಳಿಗೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರು ಸಹ ಪ್ರತೀ ಸುತ್ತಿನಲ್ಲಿ ಲಸಿಕೆ ಹಾಕುವುದು ಈ ರೋಗ ನಿಯಂತ್ರಣಕ್ಕೆ ಅವಶ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ.

ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆ/ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ನಿಗದಿತ ದಿನದಂದು ಜಾನುವಾರುಗಳನ್ನು ಮನೆಯಲ್ಲಿ ಕಟ್ಟಿ ಹಾಕಿ, ಲಸಿಕೆ ಹಾಕಲು ಬರುವ ಸಿಬ್ಬಂದಿಯೊಡನೆ ಸಹಕರಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಪಶುಪಾಲನ ಇಲಾಖೆಯ ಮುಖ್ಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Join Whatsapp
Exit mobile version