Home ಟಾಪ್ ಸುದ್ದಿಗಳು ಮಂಗಳೂರು | ಬದ್ರಿಯಾ ಕಾಲೇಜಿನಲ್ಲಿ `ಉರ್ದು ಚರ್ಚಾ ಸ್ಪರ್ಧೆ’ : ಮಾತೃ ಭಾಷೆಯಲ್ಲಿ ಅಧ್ಯಯನಕ್ಕೆ ಕರೆ

ಮಂಗಳೂರು | ಬದ್ರಿಯಾ ಕಾಲೇಜಿನಲ್ಲಿ `ಉರ್ದು ಚರ್ಚಾ ಸ್ಪರ್ಧೆ’ : ಮಾತೃ ಭಾಷೆಯಲ್ಲಿ ಅಧ್ಯಯನಕ್ಕೆ ಕರೆ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಉರ್ದು ಭಾಷೆಯನ್ನು ಉತ್ತೇಜಿಸುವ ಸಲುವಾಗಿ `ಅಂಜುಮನ್-ತಾರಖ್ಖಿ-ಇ-ಉರ್ದು’ ಎನ್ ಜಿಒ ನಗರದ ಬದ್ರಿಯಾ ಕಾಲೇಜಿನಲ್ಲಿ ಆಯೋಜಿಸಿದ ಉರ್ದು ಭಾಷೆಯ ಚರ್ಚಾ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು.
ಬದ್ರಿಯಾ ಕಾಲೇಜಿನ ಶತಮಾನೋತ್ಸವದ (1924-2024) ಅಂಗವಾಗಿ ಈ ಉರ್ದು ಡಿಬೇಟ್ ಟ್ರೋಪಿ ಸ್ಪರ್ಧೆ ನೆರವೇರಿದ್ದು, ಬೆಳಿಗಿನ ಅವಧಿಯಲ್ಲಿ ಚರ್ಚಾ ಸ್ಪರ್ಧೆ ಮತ್ತು ಸಂಜೆ ಟ್ರೋಫಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.


ಚರ್ಚಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ಪ್ರಾಥಮಿಕ ಶಾಲೆಗಳು ಭಾಗಿಯಾಗಿತ್ತು. ಹಿರಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಐದು ಪ್ರೌಢಶಾಲೆಗಳು ಭಾಗವಹಿಸಿದ್ದವು.


ಕಿರಿಯರ ವಿಭಾಗದಲ್ಲಿ ಕಂಡತ್ಪಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಗೌಸ್ ಪ್ರಥಮ, ಕಾವಲ್ ಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ರಿಫಾ ಮತ್ತು ಫಾತಿಮಾ ಸುಝನಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅಬ್ದುಲ್ ಬಾರಿ ಮತ್ತು ಅಬ್ದುಲ್ ರಹ್ಮಾನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ, ಉಳ್ಳಾಲದ ಸೈಯ್ಯದ್ ಮದನಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಖದೀಜತುಲ್ ಫರ್ಝಾನಾ ತೃತೀಯ ಸ್ಥಾನ ಪಡೆದರು.


ಕಿರಿಯರ ಮಟ್ಟದ ಬದ್ರಿಯಾ ಶತಮಾನೋತ್ಸವ ಚಾಂಪಿಯನ್‌ಶಿಪ್ ಟ್ರೋಫಿ ಕಾವಳಕಟ್ಟೆ (ಬಂಟ್ವಾಳ ತಾಲೂಕು) ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪಾಲಾದರೆ, ಹಿರಿಯರ ಟ್ರೋಫಿಯನ್ನು ಉಡುಪಿ ಜಿಲ್ಲೆಯ ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಿಟ್ಟಿಸಿಕೊಂಡಿತು. ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ 20 ಮಂದಿ ಕಿರಿಯ ಮತ್ತು ಹಿರಿಯ ಮಟ್ಟದ ವಿದ್ಯಾರ್ಥಿಗಳಿಗೆ ಸಮಾಧಾನಕರ ಪ್ರಮಾಣಪತ್ರಗಳನ್ನು ನೀಡಿಲಾಯಿತು.


ಇದೇ ವೇಳೆ ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಯ 2023-24ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ತಮ್ಮ ತಮ್ಮ ಶಾಲೆಗಳಲ್ಲಿ ಉರ್ದು ಭಾಷೆ ಟಾಪರ್ ಆಗಿದ್ದ ಮೊಹಮ್ಮದ್ ಮೆರಾಜ್ ಖಾನ್, ಫೌಜಿಯಾ ಬಾನು, ಮೌಲಾನಾ ಮೊಹಮ್ಮದ್ ಉಝೈಮ್, ಸಬಿಯಾ ನಾಝ್ ಮತ್ತು ಆಯಿಷಾ ರುಹಾ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪೀಸಿ ಗ್ರೂಪ್ ಆಫ್ ಕಂಪೆನಿಗಳ ಎಂ.ಡಿ ಮತ್ತು ಬದ್ರಿಯಾ ಸಂಸ್ಥೆಯ ಕರೆಸ್ಪಾಂಡೆಂಟ್ ಆಗಿರುವ ಪಿ.ಸಿ ಹಾಸಿರ್ ಮಾತನಾಡಿ, ಇಂತಹ ಚರ್ಚಾ ಕೂಟಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗುವುದರ ಜೊತೆಗೆ ಭವಿಷ್ಯದಲ್ಲಿ ದೇಶದ ಶಾಸನ ರೂಪಿಸುವವರನ್ನಾಗಿಸಲು ದಾರಿ ಮಾಡಿಕೊಡುತ್ತದೆ ಎಂದರು. ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಉತ್ತಮ ಎಂದು ಬಣ್ಣಿಸಿದರು.


ಮುಖ್ಯ ಭಾಷಣ ಮಾಡಿದ ಉರ್ದು ತಾರಖಿ ಹಿಂದ್ ಕಾರ್ಯದರ್ಶಿ ಬೆಂಗಳೂರು ಇದರ ಕಾರ್ಯದರ್ಶಿ ಅಬಿದ್ ಉಲ್ಲಾ ಅಥ್ಹರ್ ಅವರು, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು, ಅಮೆರಿಕ, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜಪಾನ್, ಜರ್ಮನಿ, ಇಟಲಿ ಮತ್ತು ಕೊರಿಯಾದಂತಹ ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ಶಿಕ್ಷಣವನ್ನು ಒದಗಿಸುತ್ತಿದೆ ಎಂದು ತಿಳಿಸಿದರು. ಭಾಷೆಯನ್ನು ಕಲಿಯುವುದು ಮತ್ತು ಅರ್ಥಮಾಡಿಕೊಳ್ಳುವುದು ಭಿನ್ನವಾಗಿದೆ, ಇಂಗ್ಲಿಷ್‌ನಂತಹ ವಿದೇಶಿ ಭಾಷೆಗಳಲ್ಲಿ ಕಲಿಯುವುದಕ್ಕಿಂತ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೆ ವಿಷಯಗಳನ್ನು ಉತ್ತಮವಾಗಿ ಗ್ರಹಿಸಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕತಾರ್ ನ ಅನಿವಾಸಿ ಭಾರತೀಯ ಉದ್ಯಮಿ ಮುಮ್ತಾಜ್ ಹುಸೇನ್ ಅವರು ತಾವು ಕಲಿತ ಬದ್ರಿಯಾ ಕಾಲೇಜಿನ ನೆನಪುಗಳು ಮತ್ತು ಇತಿಹಾಸವನ್ನು ಮೆಲುಕು ಹಾಕಿದರು.


ಕಾರ್ಯಕ್ರಮದ ಆಯೋಕರಾದ ದುಬೈನ ನಾರ್ದರ್ನ್ ಇನ್ಶೂರೆನ್ಸ್ LLC ಇದರ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಂ ಅಫ್ರೋಜ್ ಅಸ್ಸಾದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಸ್ ಮದನಿ ಉರ್ದು ಭಾಷೆಯನ್ನು ಉತ್ತೇಜಿಸುವ ಸಂಸ್ಥೆಯ ಉದ್ದೇಶಗಳು ಮತ್ತು ಭವಿಷ್ಯದ ಚಟುವಟಿಕೆಗಳನ್ನು ವಿವರಿಸಿದರು. ಕಾರ್ಯದರ್ಶಿ ಮಾಸ್ಟರ್ ಮಹಮ್ಮದ್ ಹನೀಫ್ ಸ್ವಾಗತಿಸಿದರೆ, ಸದಸ್ಯ ರಹ್ಮತುಲ್ಲಾ ವಂದನಾರ್ಪಣೆಗೈದರು. ಬದ್ರಿಯಾ ಹಳೆಯ ವಿದ್ಯಾರ್ಥಿಯೂ ಆಗಿರುವ ಅಂತಾರಾಷ್ಟ್ರೀಯ ಮಟ್ಟದ ನಿರೂಪಕ ಸಾಹಿಲ್ ಜಾಹಿರ್ ಕಾರ್ಯಕ್ರಮವನ್ನು ನಿರೂಪಿಸಿದರು.

Join Whatsapp
Exit mobile version