Home ಕರಾವಳಿ ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರಕಟ

ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರಕಟ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23 ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯು ಪ್ರಕಟಗೊಂಡಿದ್ದು, ಯಕ್ಷಮಂಗಳ ಪ್ರಶಸ್ತಿಗೆ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕ, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ ಹಾಗೂ ತೆಂಕು ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಯಕ್ಷಮಂಗಳ ಕೃತಿ ಪ್ರಶಸ್ತಿಗೆ ರಾಧಾಕೃಷ್ಣ ಕಲ್ಚಾರ್ ಅವರ ‘ಪೀಠಿಕಾ ಪ್ರಕರಣ’ ಕೃತಿಯು ಆಯ್ಕೆಯಾಗಿದೆ.

ಯಕ್ಷಮಂಗಳ ಪ್ರಶಸ್ತಿ 25,000 ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿ 10,000 ನಗದು, ಪ್ರಶಸ್ತಿ, ಸ್ಮರಣಿಕೆಗಳನ್ನು ಒಳಗೊಂಡಿದೆ.

ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್ , ಯಕ್ಷಗಾನ ಸಂಘಟಕರ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕರಾದ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ‌ ಸಭೆಯಲ್ಲಿ ಈ ಹೆಸರುಗಳನ್ನು ಸರ್ವಾನುಮತದಿಂದ ಶಿಫಾರಸು ಮಾಡಲಾಗಿದೆ..

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ‌ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತರ ಪರಿಚಯ

ಶ್ರೀಧರ ಹಂದೆ:
ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಕಲಾವಿದರಾಗಿ,‌ ಯಕ್ಷಗಾನ ಸಂಘಟಕರಾಗಿ ಗುರುತಿಸಿರುವ ಶ್ರೀಧರ ಹಂದೆಯವರಿಗೆ ಮಕ್ಕಳ ಯಕ್ಷಗಾನ ಮೇಳವೆಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿ ಸಾಕಾರಗೊಳಿಸಿದ ಕೀರ್ತಿ ಸಲ್ಲುತ್ತದೆ. ಉಪನ್ಯಾಸಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಇವರು 1991ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮರವರಿಂದ ಅತ್ಯುತ್ತಮ ಶಿಕ್ಷಕ ರಾಷ್ಟ್ರಪತಿಯನ್ನು ಪಡೆದಿರುತ್ತಾರೆ. ಮಕ್ಕಳಿಗೆ ಯಕ್ಷ ಕಲೆಯನ್ನು ಶಾಸ್ತ್ರೀಯವಾಗಿ ತರಬೇತಿ ನೀಡಿದ್ದಾರೆ. ಭಾರತ ಮಾತ್ರವಲ್ಲ ಅಮೇರಿಕ, ಬಹರೈನ್, ಲಂಡನ್, ಮೆಂಚೆಸ್ಟರ್ ಮುಂತಾದೆಡೆ ಪ್ರದರ್ಶನ ನೀಡುವ ಮೂಲಕ ಯಕ್ಷಗಾನವನ್ನು ವಿಶ್ವವ್ಯಾಪಿಗೊಳಿಸಲು ಶ್ರಮಿಸಿದ್ದಾರೆ. ಕಳೆದ 43 ವರ್ಷಗಳಲ್ಲಿ 2000ಕ್ಕೂ ಮಿಕ್ಕಿ ಮಕ್ಕಳ ಯಕ್ಷ ಪ್ರದರ್ಶನ ನೀಡಿದ ಕೀರ್ತಿ ಇವರದ್ದು. ಯಕ್ಷಗಾನ ಭಾಗವತ, ಗಮಕಿ, ಕವಿ, ನಟ-ನಿರ್ದೆಶಕ, ನಾಟಕಕಾರ, ಸಂಘಟಕರಾಗಿಯೂ ಗುರುತಿಸಿಕೊಂಡಿರುವ ಇವರು, ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ಎಂ.ಕೆ.ರಮೇಶ್ ಆಚಾರ್ಯ:
ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ರಂಗದ ಸರ್ವ ಸಮರ್ಥ ಸ್ತ್ರೀವೇಷ ಕಲಾವಿದರಾಗಿರುವ ಎಂ.ಕೆ.ರಮೇಶ್ ಆಚಾರ್ಯ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ಯಕ್ಷಗುರು, ಪ್ರಸಂಗಕರ್ತರಾಗಿಯೂ ಗುರುತಿಸಿದ್ದಾರೆ. ಸಾಂಪ್ರದಾಯಿಕ ನೆಲೆಯಲ್ಲಿಯೇ ಪೌರಾಣಿಕ ಪಾತ್ರಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಪ್ರದರ್ಶಿಸುವ. ಎಂ.ಕೆ‌.ಆಚಾರ್ಯ ಅವರು ಸ್ತ್ರೀಪಾತ್ರಕ್ಕೆ ಒಪ್ಪುವ ರೂಪ, ಮಧುರ ಕಂಠ, ಆಂಗಿಕ ಲಾಲಿತ್ಯ, ಪಾಂಡಿತ್ಯ, ಸಶಕ್ತ ರಂಗನಡೆಯೊಂದಿಗೆ ಸ್ತ್ರೀಪಾತ್ರಧಾರಿಯಾಗಿ ಜನಮೆಚ್ಚುಗೆ ಗಳಿಸಿದ್ದಾರೆ. ಮಂದಾರ್ತಿ, ಧರ್ಮಸ್ಥಳ, ಸುರತ್ಕಲ್, ಸಾಲಿಗ್ರಾಮ, ಸೌಕೂರು, ಪೆರ್ಡೂರು, ಮಂಗಳಾದೇವಿ ಮೇಳಗಳಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಚಂದ್ರಮತಿ, ದ್ರೌಪದಿ, ರುಕ್ಮಿಣಿ, ಶಾಂತಲೆ, ಸೀತೆ, ಮೇನಕೆ, ಸೈರೇಂದ್ರಿ ಮೊದಲಾದ ಸ್ತ್ರೀಪಾತ್ರಗಳು ಕಲಾರಸಿಕರ ಮನಗೆದ್ದಿವೆ. ಉತ್ತಮ ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿಯೂ ಗುರುತಿಸಿಕೊಂಡಿರುವ ಇವರು ಅನೇಕ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನೂ ನೀಡಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಲಾವಿದರಾಗಿದ್ದಾರೆ.

‘ಪೀಠಿಕಾ ಪ್ರಕರಣ’ ಗ್ರಂಥ:
ಖ್ಯಾತ ಅರ್ಥಧಾರಿ ಹಾಗೂ ಲೇಖಕರಾಗಿರುವ ರಾಧಾಕೃಷ್ಣ ಕಲ್ಚಾರ್ ಅವರು ಈಗಾಗಲೇ ಪರಕಾಯ ಪ್ರವೇಶ, ಉಲಿಯ ಉಯ್ಯಾಲೆ, ಅರ್ಥಾಲೋಕ ಮೊದಲಾದ ಕೃತಿಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ‘ಪೀಠಿಕಾ ಪ್ರಕರಣ’ ಇವರ ಇತ್ತೀಚೆಗಿನ ಒಂದು ಅಪೂರ್ವ ಕೃತಿಯಾಗಿದೆ. ಮೂವತ್ತೆಂಟು ಪ್ರಸಂಗಗಲ್ಲಿ ಬರುವ ಆಯ್ದ ನೂರ ನಲ್ವತ್ತು ಪಾತ್ರಗಳ ಈ ಕೃತಿ ಯಕ್ಷಗಾನ ಅರ್ಥಧಾರಿಗಳಿಗೆ ಮತ್ತು ವೇಷಧಾರಿಗಳಿಗೆ ಕೈ ದೀವಿಗೆಯಾಗಿದೆ. ಯಕ್ಷಗಾನ ಅರ್ಥಗಾರಿಕೆಯ ಮೌಲಿಕ ಸಂಗತಿಗಳನ್ನು, ವಿಶಿಷ್ಟ ಶಕ್ತಿ ಸಾಮರ್ಥ್ಯವನ್ನು ಕಲ್ಚಾರ್ ಈ ಪೀಠಿಕೆಗಳಲ್ಲಿ ನಿರೂಪಿಸಿದ್ದಾರೆ.

Join Whatsapp
Exit mobile version