Home ಟಾಪ್ ಸುದ್ದಿಗಳು ಮಂಗಳೂರು: ದ್ವೀಪಗಳ ಉಳಿವಿಗಾಗಿ ಐಕ್ಯತಾ ಮೆರವಣಿಗೆ

ಮಂಗಳೂರು: ದ್ವೀಪಗಳ ಉಳಿವಿಗಾಗಿ ಐಕ್ಯತಾ ಮೆರವಣಿಗೆ

ಮಂಗಳೂರು: ಪಾವೂರು ಉಳಿಯ, ರಾಣಿಪುರ ಮತ್ತು ಉಳ್ಳಾಲ ಹೊಯಿಗೆ ದ್ವೀಪವಾಸಿಗಳ ಉಳಿವಿಗಾಗಿ ಐಕ್ಯತಾ ಮೆರವಣಿಗೆ ಮಂಗಳೂರಿನಲ್ಲಿ ನಡೆಯಿತು.

ಪ್ರತಿಭಟನಾ ಮೆರವಣಿಗೆಗೆ ವಿವಿಧ ಸಂಘಟನೆಯ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೆಂಬಲ ಸೂಚಿಸಿದರು.

ಬಲ್ಮಠದ ಸಿಎಸ್‌ಐ ಮೈದಾನದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಜ್ಯೋತಿ ವೃತ್ತದ ಮೂಲಕ ಕ್ಲಾಕ್ ಟವರ್ ವರೆಗೆ ಮೌನ ಮೆರವಣಿಗೆ ನಡೆಸಿದರು.

ಮಿನಿವಿಧಾನಸೌಧದ ಮುಂದೆ ಏರ್ಪಡಿಸಿದ್ದ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಾನ ಮನಸ್ಕ ಸಂಘಟನೆಗಳ ಮುಖಂಡ ಮುನೀರ್ ಕಾಟಿಪಳ್ಳ, ಅಧಿಕಾರಿಗಳು ಮತ್ತು ಆಡಳಿತ ನಡೆಸುವವರು ಮನಸ್ಸು ಮಾಡಿದರೆ ಅಕ್ರಮ ಮರಳುಗಣಿಗಾರಿಯನ್ನು ಒಂದೇ ದಿನದಲ್ಲಿ ತಡೆಯಬಹುದು. ಆದರೆ ಎಲ್ಲರೂ ಶಾಮೀಲಾಗಿ ದಂಧೆ ಮಾಡುತ್ತಿರುವುದರಿಂದ ಇದು ಸಾಧ್ಯವಾಗಲಿಲ್ಲ ಎಂದರು.

‘ಮರಳು ದಂಧೆಕೋರರು ಎಲ್ಲ ಪಕ್ಷಗಳ ಮುಖಂಡರ ಜೊತೆಯೂ ಚೆನ್ನಾಗಿ ಇರುತ್ತಾರೆ. ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲುತ್ತಾರೆ. ಇಂಥ ಅಕ್ರಮ ಮುಂದುವರಿಯಲು ಬಿಡುವುದಿಲ್ಲ. ಮರಳುಗಾರಿಕೆ ಮುಂದುವರಿದರೆ ಕೊಣಾಜೆ ಮತ್ತಿತರ ಠಾಣೆಗಳ ಮುಂದೆ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡಲಿದ್ದಾರೆ’ ಎಂದು ಅವರು ಎಚ್ಚರಿಕೆ ನೀಡಿದರು.

Join Whatsapp
Exit mobile version