ಮಂಗಳೂರು: ಸಿಂಥೆಟಿಕ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಮತ್ತಿಬ್ಬರು ನೈಜೀರಿಯಾ ಮೂಲದ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಮೂರು ಮಂದಿ ನೈಜೀರಿಯಾ ಮೂಲದ ಪ್ರಜೆಗಳು ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಸಿಂಥೆಟಿಕ್ ಡ್ರಗ್ಸ್ ಪೂರೈಕೆ- ಮಾರಾಟ ಜಾಲಕ್ಕೆ ಸಂಬಂಧಿಸಿ ಕೇರಳ ಮೂಲದ ಪ್ರಮುಖ ಆರೋಪಿ ಹಾಗೂ ನೈಜೀರಿಯಾದ ಮೂರು ಮಂದಿಯನ್ನು ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸುವ ಮೂಲಕ ಮಂಗಳೂರು ಪೊಲೀಸರು ಡ್ರಗ್ಸ್ ಜಾಲದ ಪ್ರಮುಖ ಜಾಲವನ್ನು ಬೇಧಿಸಿದ್ದರು. ಮುಂದುವರಿದು ಪ್ರಕರಣದ ಸಮಗ್ರ ತನಿಖೆಗಾಗಿ ಎಸಿಪಿ ರಂಜಿತ್ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಮೂಲದ ಆರೋಪಿಯ ತನಿಖೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 3.5 ಲಕ್ಷ ರೂ. ಬೆಲೆಯ 55 ಗ್ರಾಂ ಎಂಡಿಎಂಯನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಬಳಕೆಯಾಗಿದ್ದ ಕಾರು ಮತ್ತು ಎಂಡಿಎಂ ಮಾರಾಟದಿಂದ ಪಡೆಯಲಾಗಿದ್ದ 70 ಸಾವಿರ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಎಸಿಪಿ ಪಿಎ ಹೆಗಡೆ ಉಪಸ್ಥಿತರಿದ್ದರು.