ಮಂಗಳೂರು | ಭಾರೀ ಗಾಂಜಾ ದಂಧೆ ಭೇದಿಸಿದ ಪೊಲೀಸರು: ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರ ಬಂಧನ

Prasthutha|

ಮಂಗಳೂರು: ಭಾರೀ ಗಾಂಜಾ ಸಾಗಾಟ ಮತ್ತು ಮಾರಾಟ ದಂಧೆ ಭೇದಿಸಿರುವ ಮಂಗಳೂರು ಪೊಲೀಸರು, ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವೈದ್ಯರು, ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

- Advertisement -


ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ(38) ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ವೈದ್ಯ ವಿದ್ಯಾರ್ಥಿಗಳ ಹೆಸರನ್ನು ಹೇಳಿದ್ದ. ಆತ ನೀಡಿದ ಮಾಹಿತಿ ಆಧಾರದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು, ವೈದ್ಯರು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಕಿಶೋರಿಲಾಲ್ ಯುಕೆಯ ಪ್ರಜೆಯಾಗಿದ್ದು, ಎನ್ ಆರ್ ಐ ಕೋಟಾದಲ್ಲಿ ಡೆಂಟಲ್ ವಿದ್ಯಾರ್ಥಿಯಾಗಿದ್ದ. ಆದರೆ ಕಳೆದ ಹದಿನೈದು ವರ್ಷಗಳಿಂದಲೂ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದು, ಆತನಿಗೆ ಶಿಕ್ಷಣ ಇನ್ನೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆತ ಮಂಗಳೂರಿನಲ್ಲಿ ಗಾಂಜಾ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಶಶಿಕುಮಾರ್ ತಿಳಿಸಿದರು.


ಕೇರಳ ಮೂಲದ ಡಾ ಸಮೀರ್ (32), ಡಾ. ನಾದಿಯಾ ಸಿರಾಜ್ (24), ತಮಿಳುನಾಡಿನ ಡಾ ಮಣಿಮಾರನ್ ಮುತ್ತು (28), ಆಂಧ್ರದ ಡಾ ವರ್ಷಿಣಿ ಪ್ರತಿ (26), ಪಂಜಾಬ್’ನ ಡಾ ಭಾನು ಧಾಹಿಯಾ (27), ಚಂಡಿಘಡದ ಡಾ. ರಿಯಾ ಚಡ್ಡಾ (22), ದೆಹಲಿಯ ಡಾ. ಕ್ಷಿತಿಜ್ ಗುಪ್ತಾ (25), ಮಹಾರಾಷ್ಟ್ರದ ಡಾ ಇರಾ ಬಸಿನ್ (23) ಮತ್ತು ಬಂಟ್ವಾಳ ಮಾರಿಪಳ್ಳದ ಮುಹಮ್ಮದ್ ರವೂಫ್ ಗೌಸ್ (34) ಬಂಧಿತ ಆರೋಪಿಗಳು ಎಂದು ಅವರು ಮಾಹಿತಿ ನೀಡಿದರು.

- Advertisement -


ಆರೋಪಿಗಳ ಪೈಕಿ 8 ಮಂದಿ ಕೆ.ಎಂ.ಸಿ ಅತ್ತಾವರ ಮತ್ತು ಕೆ.ಎಂ.ಸಿ ಮಣಿಪಾಲ ಸಂಸ್ಥೆಗೆ ಸೇರಿದವರು ಮತ್ತು ಓರ್ವ ಯೆನೇಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿಗೆ ಸೇರಿದವರು ಎಂಬುದು ತಿಳಿದುಬಂದಿದೆ.


ಸಿಸಿಬಿ ಇನ್ಸ್’ಪೆಕ್ಟರ್ ಶ್ಯಾಮ್ ಸುಂದರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ನೀಲ್ ಕಿಶೋರಿಲಾಲ್ ರಾಮ್ ಜಿ ಶಾನನ್ನು ಮೊದಲು ಬಂಧಿಸಲಾಗಿತ್ತು. ಆತನ ಬಳಿ 50 ಸಾವಿರ ಮೌಲ್ಯದ 2 ಕೆಜಿ ಗಾಂಜಾ, ಮೊಬೈಲ್ ಮತ್ತು ನಗದನ್ನು ಮತ್ತು ಆಟಿಕೆ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಆ ಬಳಿಕ ಕಾರ್ಯಾಚರಣೆ ನಡೆಸಿ ಉಳಿದವರನ್ನು ಪಿಜಿಗಳು, ಹಾಸ್ಟೆಲ್ ಮತ್ತು ಬಾಡಿಗೆ ಮನೆಗಳಿಂದ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

Join Whatsapp
Exit mobile version