ಮಂಗಳೂರು: ನಗರದ ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಗುಡ್ಡೆಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕ-ಯುವತಿಯರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದು, ಇಬ್ಬರು ಯುವಕರ ಮೇಲೆ ಪೋಕ್ಸೋ ಹಾಗೂ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಭಿನ್ನಕೋಮಿನ ಜೋಡಿ ಚಿಲಿಂಬಿ ಗುಡ್ಡೆಯಲ್ಲಿರುವುದಾಗಿ ಶಂಕಿಸಿ ಸ್ಥಳೀಯರು ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿಗೆ ಮುಂದಾಗಿದ್ದರು ಎನ್ನಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪತ್ತೆಯಾದ ಹಿನ್ನೆಲೆ ಬಜ್ಪೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ವಿಚಾರಣೆ ವೇಳೆ ಇಬ್ಬರು ಯುವತಿ ಹಾಗೂ ಓರ್ವ ಯುವಕ ಒಂದೇ ಧರ್ಮಕ್ಕೆ ಸೇರಿದವರಾಗಿದ್ದು, ಓರ್ವ ಮಾತ್ರ ಭಿನ್ನ ಧರ್ಮಕ್ಕೆ ಸೇರಿದ್ದಾಗಿ ತಿಳಿದು ಬಂದಿದೆ.
ಪೊಲೀಸರ ವಿಚಾರಣೆ ವೇಳೆ ಯುವಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಡ್ರಗ್ ಸೇವನೆ ದೃಢಪಟ್ಟಿದೆ. ಅಲ್ಲದೇ, ತಂಡದಲ್ಲಿ ಓರ್ವ ಅಪ್ರಾಪ್ತೆಯೂ ಇದ್ದು, ಆಕೆಯ ಪೋಷಕರು ನೀಡಿದ ದೂರಿನನ್ವಯ ಯುವಕರಿಬ್ಬರ ಮೇಲೆ ಪೋಕ್ಸೋ ಹಾಗೂ ಡ್ರಗ್ ಸೇವನೆ ಹಿನ್ನೆಲೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.