Home ಕರಾವಳಿ ಮಂಗಳೂರು | ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ; ಮುಚ್ಚುವ ಹಂತಕ್ಕೆ ತಲುಪಿರುವ ಸರಕಾರಿ ಶಾಲೆಗಳು

ಮಂಗಳೂರು | ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ; ಮುಚ್ಚುವ ಹಂತಕ್ಕೆ ತಲುಪಿರುವ ಸರಕಾರಿ ಶಾಲೆಗಳು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 24 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸ್ಥಿತಿ ಎದುರಾಗಿದೆ ಎಂದು ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಆರೋಪಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಉತ್ತರ ವಲಯದಲ್ಲಿ 6, ದಕ್ಷಿಣದಲ್ಲಿ 3, ಮೂಡುಬಿದಿರೆ 5, ಬೆಳ್ತಂಗಡಿ 3, ಪುತ್ತೂರು 1, ಬಂಟ್ವಾಳ 4, ಸುಳ್ಯದ 1 ಶಾಲೆಯಲ್ಲಿ ಸರಕಾರಿ ಶಿಕ್ಷಕರೇ ಇಲ್ಲ. ಹೀಗಾಗಿ ಈ ಎಲ್ಲ ಶಾಲೆಗಳು ಯಾವುದೇ ಸಂದರ್ಭದಲ್ಲಿ ಮುಚ್ಚುವ ಪರಿಸ್ಥಿತಿಯಲ್ಲಿದೆ. ಮಂಗಳೂರಿನ ದೇರೆಬೈಲ್‌ ಹೋಲಿ ಫ್ಯಾಮಿಲಿ ಹಿರಿಯ ಪ್ರಾಥಮಿಕ ಶಾಲೆ ಈಗಾಗಲೇ ಮುಚ್ಚಿದೆ ಎಂದು ಹೇಳಿದರು.


ದ.ಕ. ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಷಡ್ಯಂತ್ರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ. ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಹಾಗೂ ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡದಿರುವುದು ಹಾಗೂ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸೇನೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ ಆಳ್ವ ಉಪಸ್ಥಿತರಿದ್ದರು.

Join Whatsapp
Exit mobile version