►ಗಾಂಜಾ ವ್ಯಸನಿಗಳಿಂದ ಕೊಲೆ?, ಕುಟುಂಬಸ್ಥರ ಆರೋಪ
ಮಂಗಳೂರು: ಕಾಣೆಯಾಗಿದ್ದ ಮುಲ್ಕಿ ಕೊಳ್ನಾಡಿನ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಅವರ ಮೃತದೇಹವು ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಪತ್ತೆಯಾಗಿದೆ.
ಅವರ ಮೃತದೇಹವನ್ನು ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡ ಶುಕ್ರವಾರ ಬೆಳಗ್ಗೆ ಮೇಲಕ್ಕೆತ್ತಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಬುಧವಾರದಿಂದ ನಾಪತ್ತೆಯಾಗಿದ್ದ ಮುಹಮ್ಮದ್ ಶರೀಫ್ (52) ಅವರ ಮೃತದೇಹವು ಗುರುವಾರ ಕುಂಜತ್ತೂರು ಪದವಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿತ್ತು.
ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ ಇವರು ಅಂದು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಪತ್ನಿ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದಂತೆ ಗುರುವಾರ ರಾತ್ರಿ ಕೇರಳ- ಕರ್ನಾಟಕ ಗಡಿ ಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಗಾಂಜಾ ವ್ಯಸನಿಗಳು ಶರೀಫ್ ರ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೋಗಿ ಬಳಿಕ ಯಾವುದೋ ಕಾರಣಕ್ಕೆ ಅವರನ್ನು ಕೊಲೆಗೈದಿರಬಹುದು ಎಂದು ಮೃತರ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಜೂಜಾಟ ಆಟೋ ಚಾಲಕನ ಕೊಲೆಗೆ ಕಾರಣವಾಗಿದೆಯೇ ಅಥವಾ ಮಾದಕ ವ್ಯಸನಿ ಗಳು ಬಾಡಿಗೆಗೆ ಕರೆ ದೊಯ್ದು ಈ ಕೃತ್ಯ ನಡೆಸಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.