Home ಕರಾವಳಿ ಮಂಗಳೂರು: 25 ಲಕ್ಷ ಲಂಚ ಪಡೆಯುತ್ತಿದ್ದ ಮೂಡಾ ಕಮಿಷನರ್ ಬಂಧನ

ಮಂಗಳೂರು: 25 ಲಕ್ಷ ಲಂಚ ಪಡೆಯುತ್ತಿದ್ದ ಮೂಡಾ ಕಮಿಷನರ್ ಬಂಧನ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಆಯುಕ್ತ ಮನ್ಸೂರ್ ಆಲಿ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನ್ಸೂರ್ ಅಲಿಯನ್ನು ಲಂಚ ಪಡೆಯುತ್ತಿರುವಾಗಲೇ ಬಂಧಿಸಿದ್ದಾರೆ.

ಟಿಡಿಆರ್ ಕ್ಲಿಯರೆನ್ಸ್ ಮಾಡುವ ವಿಚಾರದಲ್ಲಿ ಬ್ರೋಕರ್ ಸಲೀಂ ಎಂಬವನ ಸಹಕಾರದೊಂದಿಗೆ ಮನ್ಸೂರ್ ಅಲಿ ಲಂಚ ಸ್ವೀಕರಿಸುತ್ತಿದ್ದರು. ಲೋಕಾಯುಕ್ತ ಡಿವೈಎಸ್‌ಪಿ ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಬಿಲ್ಡರ್ ಒಬ್ಬರು ಮಂಗಳೂರು ತಾಲೂಕು ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಉದ್ದೇಶದಿಂದ ಸದ್ರಿ ಜಮೀನನ್ನು ಟಿ.ಡಿ.ಆರ್ ನಿಯಮದಡಿ 20ea ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಫಿರ್ಯಾದಿದಾರರಿಗೆ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಸದ್ರಿ ಜಮೀನು 2024 ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೋಂದಣಿಯಾಗಿತ್ತು.

ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಸದ್ರಿ ಜಮೀನಿನ ಟಿ.ಡಿ.ಆ‌ರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಪತ್ರ ಕಳುಹಿಸಿದ್ದು, ಮುಡಾ ಆಯುಕ್ತರಾದ ಮನ್ಸೂರ್ ಆಲಿರವರು ಸದ್ರಿ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ಬಿಲ್ಡರ್ ಮುಡಾ ಆಯುಕ್ತ ಮನ್ಸೂರ್ ಆಲಿ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

Join Whatsapp
Exit mobile version