ಮಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ವಶಪಡಿಸಿಕೊಳ್ಳಲಾದ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಅಮಾನತುಗೊಂಡಿದ್ದ ನಾಲ್ವರು ಪೊಲೀಸರ ಪೈಕಿ ಮೂವರು ಅಧಿಕಾರಿಗಳಿಗೆ ಸಿಐಡಿ ಮತ್ತು ಮಂಗಳೂರು ನಗರ ಕಮಿಷನರ್ ಕ್ಲೀನ್ ಚಿಟ್ ನೀಡಿದೆ. ಒಬ್ಬರು ಕಳೆದ ತಿಂಗಳು ನಿವೃತ್ತರಾಗಿದ್ದರೆ, ಇನ್ನಿಬ್ಬರನ್ನು ಕಮಿಷನರೇಟ್’ನ ವಿವಿಧ ಹುದ್ದೆಗಳಿಗೆ ನಿಯೋಜಿಸಲಾಗಿದೆ. ಇದೇ ವೇಳೆ ನಾಲ್ಕನೇ ಅಧಿಕಾರಿಯ ವಿರುದ್ಧ ವಿಚಾರಣೆ ಮುಂದುವರಿಯಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಕೆ. ರಾಮಕೃಷ್ಣ, ಕ್ರೈಮ್ ಬ್ರಾಂಚ್’ನ ಸಬ್ ಇನ್ಸ್ ಪೆಕ್ಟರ್ ಕಬ್ಬಲ್ ರಾಜ್, ಕಾನ್ಸ್ ಸ್ಟೇಬಲ್ ಗಳಾದ ರಾಜಾ ಮತ್ತು ಆಶಿತ್ ಅವರನ್ನು ಫೆಬ್ರವರಿ 2021 ಯಲ್ಲಿ ಅಮಾನತುಗೊಳಿಸಿತ್ತು.
ಈ ಪ್ರಕರಣದಲ್ಲಿ ರಾಮಕೃಷ್ಣ, ರಾಜಾ ಮತ್ತು ಆಶಿತ್ ವಿರುದ್ಧ ತಪ್ಪು ಮಾಡಿರುವ ಕುರಿತು ಯಾವುದೇ ಪುರಾವೆಗಳಿಲ್ಲ ಎಂಬುದು ತನಿಖೆಯ ವೇಳೆ ಕಂಡುಬಂದಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ಕಬ್ಬಾಳ್ ರಾಜ್ ವಿರುದ್ಧ ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಉನ್ನತ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಶಶಿಕುಮಾರ್ ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ ನಲ್ಲಿ ನಾಲ್ವರನ್ನು ಅಮಾನತು ರದ್ದುಗೊಳಿಸಲಾಗಿತ್ತು. ಸದ್ಯ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ರಿಯಲ್ ಎಸ್ಟೇಟ್ ಹಗರಣದಲ್ಲಿ ದೆಹಲಿ ಮೂಲದ ಉದ್ಯಮಿಗಳಾದ ಟಾಮಿ ಮ್ಯಾಥ್ಯೂ, ಟಿ.ರಾಜನ್ ಮತ್ತು ಇತರರಿಂದ ಸುಮಾರು 50 ಲಕ್ಷ ಮೌಲ್ಯದ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ಈ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.