ಮಂಗಳೂರು: ನಗರದ ಮಾರ್ನಮಿಕಟ್ಟೆ ಬಳಿ ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ಇಟ್ಟು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಸಿಟಿವಿಯಲ್ಲಿ, ಓರ್ವ ವ್ಯಕ್ತಿ ಕೊರಗಜ್ಜನ ಗುಡಿಗೆ ಬಂದು ವಸ್ತುವೊಂದನ್ನು ಇಟ್ಟು ಹೋಗುತ್ತಿರುವುದು ದಾಖಲಾಗಿದ್ದು, ಇದರ ಆಧಾರದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.