Home ಕರಾವಳಿ ಮಂಗಳೂರು: ಕಂಕನಾಡಿ ನಗರ ಠಾಣೆ ಇನ್ಸ್‌ಪೆಕ್ಟರ್ ಭಜಂತ್ರಿ ಅಮಾನತು

ಮಂಗಳೂರು: ಕಂಕನಾಡಿ ನಗರ ಠಾಣೆ ಇನ್ಸ್‌ಪೆಕ್ಟರ್ ಭಜಂತ್ರಿ ಅಮಾನತು

ಮಂಗಳೂರು: ಮೇಲಧಿಕಾರಿಗಳ ಜೊತೆಗೆ ಅನುಚಿತವಾಗಿ ವರ್ತನೆ, ಮರಳು ಮಾಫಿಯಾಗಳೊಂದಿಗೆ ಶಾಮೀಲು ಮತ್ತು ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯದ ಕಾರಣ ನೀಡಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಕಂಕನಾಡಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದು, ಇದರ ವಿರುದ್ಧ ಕಾರ್ಯಾಚರಣೆ ನಡೆಸಲು ಎಸಿಪಿ ಧನ್ಯಾ ನಾಯಕ್ ಸೂಚಿಸಿದ್ದರೂ ಇನ್ಸ್‌ಪೆಕ್ಟರ್ ಭಜಂತ್ರಿ ಕ್ಯಾರೇ ಮಾಡಲಿಲ್ಲ. ಮಾತ್ರವಲ್ಲದೆ, ತನ್ನ ಮೇಲಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು.

ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿರುವುದು ಮತ್ತು ತನ್ನೊಂದಿಗೆ ಉಡಾಫೆಯಾಗಿ ವರ್ತಿಸಿದ ಬಗ್ಗೆ ಎಸಿಪಿ ಧನ್ಯಾ ನಾಯಕ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ವರದಿ ನೀಡಿದ್ದರು. ಇದಲ್ಲದೆ, ಇತ್ತೀಚೆಗೆ ಭಜಂತ್ರಿ ಅವರ ನಿವಾಸದ ಬಳಿಯ ಕೆಲವರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ತಮ್ಮೊಂದಿಗೆ ದರ್ಪ ತೋರುತ್ತಿದ್ದಾರೆಂದು ಹೇಳಿದ್ದರು. ಈ ಬಗ್ಗೆ ಕಮಿಷನರ್ ಪ್ರಶ್ನೆ ಮಾಡಿದಾಗಲೂ ಉಡಾಫೆಯಿಂದ ಪ್ರತಿಕ್ರಿಯಿಸಿದ್ದರು. ಹಿಂದೆ ಕೂಡ ಭಜಂತ್ರಿ ವಿರುದ್ದ ಹಲವಾರು ಬಾರಿ ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತಿತ್ತು. ಈ ಹಿನ್ನೆಲ್ಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಅವರು ಭಜಂತ್ರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Join Whatsapp
Exit mobile version