ಮಂಗಳೂರು: ನಗರದ ಕಂಕನಾಡಿ ಫಾದರ್ ಮುಲ್ಲರ್ ನಿಂದ ಹೊರಟಿದ್ದ ಐಸಿಯು ಆಂಬುಲೆನ್ಸ್ ವೊಂದಕ್ಕೆ ದಾರಿಯುದ್ದಕ್ಕೂ ಸುಮಾರು 30 ಕಿಲೋ ಮೀಟರ್ ತನಕ ಅಡ್ಡಿಪಡಿಸಿದ್ದ ಕಾರು ಚಾಲಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ವೈರಲ್ ಆಗಿದ್ದ ವೀಡಿಯೋ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೋನಿಶ್ ಎಂಬಾತನನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯ ವಿರುದ್ಧ ಮಂಗಳೂರು ನಗರ ಉತ್ತರ ಸಂಚಾರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಹಾಗೂ ಭಾರತೀಯ ಮೋಟಾರ್ ವಾಹನ ಕಾಯ್ದೆಯ 184ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಮುಲ್ಕಿಯಿಂದ ಉಡುಪಿ ತನಕ ಆಂಬುಲೆನ್ಸ್ ಗೆ ಅಡ್ಡಿಪಡಿಸಿದ್ದ ಕಾರು ಚಾಲಕ, ಆಂಬುಲೆನ್ಸ್ ನ ಯಾವುದೇ ಸೂಚನೆಗೂ ಕ್ಯಾರೇ ಎನ್ನದೇ ಉದ್ಧಟತನ ಮೆರೆದಿದ್ದನು. ಕಾರಿನಲ್ಲಿ ಇಬ್ಬರು ಯುವಕರು ಇರುವ ಕುರಿತು ಆಂಬುಲೆನ್ಸ್ ಚಾಲಕ ಅಯ್ಯೂಬ್ ದೂರಿದ್ದರು. ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಆಂಬುಲೆನ್ಸ್ ಚಾಲಕರು ಒತ್ತಾಯಿಸಿದ್ದರು.