ಮಂಗಳೂರು: ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವ್ಯಕ್ತಿಯ ಮೃತದೇಹವನ್ನು ಹಸ್ತಾಂತರಿಸಲು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದು ನಿರಾಕರಿಸಿದ್ದು, ಬಿಲ್ ಬಾಕಿ ಉಳಿದಿದೆ. ಮೃತದೇಹವನ್ನು ಹಸ್ತಾಂತರಿಸಲು ಸಂಪೂರ್ಣ ಬಿಲ್ ಪಾವತಿಸುವಂತೆ ಆಸ್ಪತ್ರೆ ಆಡಳಿತ ಮಂಡಳಿ ಒತ್ತಾಯಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಉಮರ್ ಎಂಬ ವ್ಯಕ್ತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಚಿಕಿತ್ಸೆಗೆ ಬೇಕಾಗಿ ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ ಜಿಲ್ಲೆ ಸಂಸ್ಥೆಯೊಂದ ಕ್ರೌಡ್ ಫಂಡಿಂಗ್ ಕೂಡ ಮಾಡಿತ್ತು. ಆದರೆ ಇಂದು ಬೆಳಿಗ್ಗೆ ಉಮರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆಸ್ಪತ್ರೆ ಮುಂದೆ ಊರಿನ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಮೃತದೇಹವನ್ನು ನೀಡಲು ಕಾಯುತ್ತಿದ್ದಾರೆ. ಆದರೆ ಮಂಗಳೂರಿನ ಖಾಸಗಿ ಆಸ್ಪತ್ರೆ ಇದುವರೆಗೂ ಮೃತದೇಹವನ್ನು ನೀಡಿಲ್ಲ , ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಲ್ ಪಾವತಿ ಮಾಡಲು ಬಾಕಿ ಇರುವ ಕಾರಣ ಮೃತ ದೇಹವನ್ನು ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಾನವೀಯತೆಯನ್ನು ಮರೆತ ಆಸ್ಪತ್ರೆ ಆಡಳಿತವನ್ನು ಜನರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು ಅಧಿಕಾರಿಗಳಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ.