ಮಂಗಳೂರು: ನಗರದಲ್ಲಿ ಇತ್ತೀಚೆಗೆ ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಒಟ್ಟು ನಾಲ್ವರು ವೈದ್ಯರು ಮತ್ತು 19 ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ವೈದ್ಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 24 ಮಂದಿ ಬಂಧಿತರಾಗಿದ್ದರು. ಈ ಪೈಕಿ ವೈದ್ಯಕೀಯ (ಬಿಡಿಎಸ್) ವಿದ್ಯಾರ್ಥಿ ಸಾಗರೋತ್ತರ ಭಾರತೀಯ ಪ್ರಜೆ ಯುನೈಟೆಡ್ ಕಿಂಗ್‌ಡಮ್‌ನ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ (38) ಹೊರತುಪಡಿಸಿ ಉಳಿದವರಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 13 ಮಂದಿಗೆ ಇತ್ತೀಚೆಗೆ ಜಾಮೀನು ಮಂಜೂರಾಗಿತ್ತು.
ಮಂಗಳವಾರ 10 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.