ಮಂಗಳೂರು : ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಜನರು ನಾನಾ ಕಷಾಯ, ಮೂಲಿಕೆಗಳ ಮೊರೆ ಹೋಗುತ್ತಿದ್ದಾರೆ. ಇದೀಗ ನಗರದ ಬರ್ಕೆ ಠಾಣೆಯಲ್ಲಿ ಪೊಲೀಸರು ‘ಹಬೆ ತಂತ್ರ’ದ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ನೂತನ ತಂತ್ರ ವಿಧಾನ ರೂಪಿಸಿದ್ದಾರೆ.
ಕೊರೋನಾ ವಾರಿಯರ್ಸ್ ಆಗಿ ದಿನದ 24 ಗಂಟೆಯೂ ನಿರಂತರ ದುಡಿಯುವ ಪೊಲೀಸರು ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅಷ್ಟೇ ಅಗತ್ಯ. ಇದಕ್ಕಾಗಿ ಅವರು ಕರ್ತವ್ಯ ನಿರ್ವಹಣೆ ಜೊತೆಗೆ ಸೋಂಕಿನ ವಿರುದ್ಧ ಹೋರಾಟ ಮಾಡಿ ದೈಹಿಕವಾಗಿ ತಾವೂ ರೋಗದಿಂದ ಪಾರಾಗುವ ತಂತ್ರಗಾರಿಕೆಯನ್ನು ಅಳವಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬರ್ಕೆ ಠಾಣೆಯ ಪೊಲೀಸರಿಗೆ ತುಳಸಿ, ಲವಂಗ ಹಾಗೂ ಕರ್ಪೂರ ಮಿಶ್ರಿತ ಹಬೆಯನ್ನು ಆಘ್ರಾಣಿಸುವ ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಗೆ ಮಾತ್ರವಲ್ಲದೆ, ದೂರು ನೀಡಲು ಬರುವ ಫಿರ್ಯಾದುದಾರರಿಗೂ ಇದರ ಉಪಯೋಗ ಪಡೆಯಲು ಅವಕಾಶ ನೀಡಲಾಗಿದೆ.
ನೀರಿಗೆ ತುಳಸಿ, ಕರ್ಪೂರ, ಲವಂಗ ಹಾಕಿ ಕುಕ್ಕರ್ ನಲ್ಲಿ ಕುದಿಸಲಾಗುತ್ತದೆ. ಕುಕ್ಕರ್ ನ ವಿಸಿಲ್ ಇರುವ ಜಾಗದಲ್ಲಿ ಪೈಪ್ ಒಂದನ್ನು ಅಳವಡಿಸಲಾಗಿದ್ದು, ಆ ಪೈಪ್ ಅನ್ನು ಮೂರು ನಳಿಕೆಗೆ ಫಿಕ್ಸ್ ಮಾಡಲಾಗಿದೆ. ಕುಕ್ಕರ್ ನಿಂದ ನಳಿಕೆಗಳ ಸಹಾಯದಿಂದ ಬರುವ ಹಬೆಯನ್ನು ಮೂವರು ಏಕಕಾಲದಲ್ಲಿ ಆಘ್ರಾಣಿಸಬಹುದು. ಇದರಿಂದ ಬರುವ ಬಿಸಿಹಬೆಯು ಮೂಗು, ಬಾಯಿ, ಕಣ್ಣುಗಳ ಮೂಲಕ ದೇಹವನ್ನು ಪ್ರವೇಶಿಸಿ ಕೊರೊನಾ ವೈರಾಣು ದೇಹದೊಳಗೆ ಹೋಗದಂತೆ ತಡೆದು ನಾಶ ಮಾಡುತ್ತದೆಯಂತೆ. ಕೊರೊನಾ ವಾರಿರ್ಯಸ್ ಆಗಿರುವ ಪೊಲೀಸರು ಹೊರಗಡೆಯಿಂದ ಬರುವ ಸಂದರ್ಭ ಈ ಹಬೆಯನ್ನು 3-4 ನಿಮಿಷ ಕಾಲ ಆಘ್ರಾಣಿಸಿಯೇ ಬರುತ್ತಾರಂತೆ. ಇದರಿಂದ ಅವರಲ್ಲಿ ಸೋಂಕು ಇದ್ದರೂ, ಅದು ದೇಹದೊಳಗೂ ಹೋಗದೆ, ಬೇರೆಯವರಿಗೂ ಹರಡದೆ ಇರುತ್ತದೆ ಎಂದು ಪೊಲೀಸರು ಹೇಳುತ್ತಾರೆ.
ಬರ್ಕೆ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿಯವರ ಮುತುವರ್ಜಿಯಿಂದ ಈ ಹಬೆ ತಂತ್ರವನ್ನು ಪೊಲೀಸರ ಆರೋಗ್ಯ ರಕ್ಷಣೆಗಾಗಿ ಮಾಡಲಾಗಿದ್ದು, ಈ ಮೂಲಕ ಬರ್ಕೆ ಪೊಲೀಸ್ ಠಾಣೆ ಎಲ್ಲರ ಗಮನ ಸೆಳೆಯುತ್ತಿದೆ.