Home ಟಾಪ್ ಸುದ್ದಿಗಳು ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ಭಾರತ ಎಂದೂ ನೋಡಿಲ್ಲ: ಸಿದ್ದರಾಮಯ್ಯ

ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ಭಾರತ ಎಂದೂ ನೋಡಿಲ್ಲ: ಸಿದ್ದರಾಮಯ್ಯ

“ಮಂಗಳೂರಿನ ಜನ ಬುದ್ಧಿವಂತರು, ವಾಸ್ತವ ಅರಿತುಕೊಂಡು ಬದಲಾವಣೆ ಮಾಡುತ್ತಾರೆ”

ಮಂಗಳೂರು: ‌ಪ್ರಧಾನಿ ಮೋದಿಯವರು ಕೊಟ್ಟ ಮಾತಿನಂತೆ ಯಾವತ್ತೂ ನಡೆದುಕೊಂಡಿಲ್ಲ. ಮೋದಿಯವರಷ್ಟು ಸುಳ್ಳು ಹೇಳಿದ ಪ್ರಧಾನ ಮಂತ್ರಿ‌ ಸ್ವಾತಂತ್ರ ಭಾರತದಲ್ಲಿ‌ ಯಾರೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ‌.

ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಗಳೂರು ಜನರು ಬುದ್ಧಿವಂತರು, ವಾಸ್ತವ ಅರಿತುಕೊಂಡು ಬದಲಾವಣೆ ಮಾಡುತ್ತಾರೆ. ಬಿಜೆಪಿಯವರನ್ನು ನಂಬಬೇಡಿ
ಮೋದಿಯವರು 10 ವರ್ಷಗಳ ಹಿಂದೆ ಏನೆಲ್ಲಾ ಹೇಳಿದ್ದರು ಎಂದು ನೆನಪಿಸಿಕೊಳ್ಳಿ, ಯಾವುದೇ ಭರವಸೆಯನ್ನು ಅವರು ಈಡೇರಿಸಿಲ್ಲ. ಕೋಮುವಾದ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ, ಭಾವನೆಗಳನ್ನು ಕೆರಳಿಸಿ ಅವರು 10 ವರ್ಷಗಳಿಂದ ಕೇಂದ್ರದಲ್ಲಿ‌ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಮೋದಿಯವರು ಹೇಳಿದಂತೆ ಅಚ್ಛೇ ದಿನ್ ಬಂತಾ? ಪೆಟ್ರೋಲ್, ಡಿಸೇಲ್, ಆಹಾರ, ದಿನನಿತ್ಯದ ವಸ್ತುಗಳ ಬೆಲೆ ಕಡಿಮೆ ಆಗಿದೆಯಾ?ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಕಾರ್ಯಕರ್ತರು ಮನೆಮನೆಗೆ ಹೋಗಿ ಸತ್ಯ ತಿಳಿಸಬೇಕು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಎಲ್ಲಾ ಭರವಸೆಗಳನ್ನು ಕೊಟ್ಟರೂ 2018ರಲ್ಲಿ‌ ನಾವು ಸೋತೆವು, ಜನ ನಮ್ಮ ಕೈ ಹಿಡಿಯಲಿಲ್ಲ, ಯಾಕೆಂದರೆ ನಾವು ಮಾಡಿದ ಕೆಲಸವನ್ನು ಜನರಿಗೆ ತಿಳಿಸಿ ಹೇಳುವಲ್ಲಿ ಎಡವಿದ್ದೆವು. ಇನ್ಮುಂದೆ ನಮ್ಮ ಸಾಧನೆಗಳು ಯೋಜನೆಗಳನ್ನು ಜನರಿಗೆ ತಿಳಿಸಿಕೊಡಬೇಕು ಎಂದರು.

ಬಿಜೆಪಿಯವರು ಕೊಟ್ಟ 600 ಭರವಸೆಗಳಲ್ಲಿ ಕನಿಷ್ಠ 60 ಭರವಸೆ ಈಡೇರಿಸಿಲ್ಲ. ಇಡೀ ದೇಶದಲ್ಲಿ‌ ಅಧಿಕಾರಕ್ಕೇರಿದ ಎಂಟು ತಿಂಗಳಲ್ಲಿ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ಅಧಿಕಾರಕ್ಕೇರಿದ ಕೆಲವೇ ಕ್ಷಣಗಳಲ್ಲಿ ವಿಧಾನಸೌಧಕ್ಕೆ ಹೋಗಿ ಅವತ್ತೇ ಐದು ಗ್ಯಾರಂಟಿಗಳ ಜಾರಿಗೆ ಆದೇಶ ಮಾಡಿದೆವು. ಮೊದಲ ದಿನವೇ ಶಕ್ತಿ ಯೋಜನೆ ಜಾರಿಗೆ ಬಂದಿತ್ತು. ಈವರೆಗೆ 155 ಕೋಟಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಕೇಂದ್ರ‌ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿದರು. ಹೀಗಾಗಿ ಐದು ಕೆಜಿ ಅಕ್ಕಿ ಜೊತೆ ಐದು ಕೆಜಿ ಅಕ್ಕಿ ಹಣ ನೇರವಾಗಿ ಖಾತೆಗೆ ಹಾಕುತ್ತಿದ್ದೇವೆ. 1 ಕೋಟಿ 20 ಲಕ್ಷ ಕುಟುಂಬಗಳಿಗೆ ತಲಾ 170 ರೂ. ಹಣ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿ ದೇಗುಲದ ಆದಾಯ ಹೆಚ್ಚಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ‌ ವೀರೇಂದ್ರ ಹೆಗ್ಗಡೆ ನನಗೆ ಪತ್ರ ಬರೆದಿದ್ದಾರೆ ಎಂದರು.

ಶಕ್ತಿ ಯೋಜನೆ, ಗೃಹ ಲಕ್ಷ್ನಿ ಯೋಜನೆಯಿಂದ ರಾಜ್ಯದಲ್ಲಿ‌ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿವೆ. 1 ಕೋಟಿ 17 ಲಕ್ಷ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ಕೊಡುತ್ತಿದ್ದೇವೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಯುವ ನಿಧಿ ಯೋಜನೆ ಕೂಡ ಜಾರಿಯಾಗಿದೆ. ಇದನ್ನು ಕಾರ್ಯಕರ್ತರು ಪ್ರತಿ‌ ಜನರಿಗೆ ತಿಳಿಸಬೇಕು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತೆ ಎಂದು ಮೋದಿ ಮತ್ತು ಬಿಜೆಪಿಯವರು ಹೇಳಿದ್ದರು‌. ಆದರೆ ಇದನ್ನು‌ ಮಾಡೇ ಮಾಡ್ತೀವಿ ಎಂದು ನಾನು ಹೇಳಿದ್ದೆ. ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿದ್ದೇನೆ. ಕರ್ನಾಟಕದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ, ಕರ್ನಾಟಕ ಆರ್ಥಿಕವಾಗಿ‌ ಸುಭದ್ರವಾಗಿದೆ ಎಂದರು.

ಮೋದಿಯವರೇ ಯಾಕಿಷ್ಟು ಸುಳ್ಳು ಹೇಳುತ್ತೀರಿ. ಮೋದಿಯವರು ನಮ್ಮ ಗ್ಯಾರಂಟಿ ಎಂಬ ಪದವನ್ನು ಕದ್ದಿದ್ದಾರೆ. ಹೋದಲ್ಲೆಲ್ಲಾ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಮೋದಿಯವರು ಕೊಟ್ಟ ಮಾತಿನಂತೆ ಯಾವತ್ತೂ ನಡೆದುಕೊಂಡಿಲ್ಲ. ಮೋದಿಯವರಷ್ಟು ಸುಳ್ಳು ಹೇಳಿದ ಪ್ರಧಾನ ಮಂತ್ರಿ‌ ಸ್ವಾತಂತ್ರ ಭಾರತದಲ್ಲಿ‌ ಯಾರೂ ಬಂದಿಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಹೋಗಿವ ತೆರಿಗೆ 4 ಲಕ್ಷದ 30 ಸಾವಿರ ಕೋಟಿ ನಮಗೆ ವಾಪಸ್ ಬರೋದು ಕೇವಲ 50,257 ಕೋಟಿ 100 ರೂಪಾಯಿಗೆ ಕೇವಲ 13 ರೂ. ವಾಪಸ್ ಬರುತ್ತೆ. ಇದು ನ್ಯಾಯನಾ? ನಾವು ಪ್ರಶ್ನೆ ಮಾಡಿದರೆ ಅವರಿಗೆ ಉರಿ ಹತ್ತಿಕೊಳ್ಳುತ್ತೆ. ಕರ್ನಾಟಕ ಮತ್ತು‌ ಕನ್ನಡಿಗರಿಗೆ ಅನ್ಯಾಯ ಆಗಿದೆ. ಇವತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಿದೆ. ಬಿಜೆಪಿಯ 25 ಸಂಸದರು ಕೋಲೆ ಬಸವ. ಒಂದೂ ದಿನವೂ ಮಾತಾಡಿಲ್ಲ. ಮಿಸ್ಟರ್ ಕಟೀಲ್ ಯಾವತ್ತಾದರೂ ಬಾಯಿ ಬಿಟ್ಟಿದ್ದಿಯೇನಪ್ಪ, ಶೋಬಾ ಕರಂದ್ಲಾಜೆ ಅಮ್ಮಾ ತಾಯಿ ನೀನ್ಯಾವತ್ಯಾದರೂ ಬಾಯಿ ಬಿಟ್ಟಿದ್ದಿಯೇನಮ್ಮ? ನಿಮಗೆ ಸ್ವಾಭಿಮಾನ ಇದ್ದರೆ
ದಕ್ಷಿಣ ಕನ್ನಡ ಉಡುಪಿಯ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ. ಕರ್ನಾಟಕದಿಂದ ಗೆದ್ದು ರಾಜ್ಯಸಭೆಗೆ ಹೋಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಮೋದಿಯವರು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ ಎಂದು ಹೇಳುತ್ತಾರೆ. ಎಲ್ಲಿ ವಿಕಾಸ ಆಗಿದೆ? ಟೋಪಿ ಹಾಕೊಂಡವರು ಬುರ್ಖಾ ಹಾಕಿದವರು ನನ್ನ ಆಫೀಸಿಗೆ ಬರ್ಬೇಡಿ‌ ಎಂದು ಯತ್ನಾಳ್‌ ಹೇಳುತ್ತಾರೆ. ರಾಷ್ಟ್ರೀಕರಣಗೊಂಡಿರುವ ಕರಾವಳಿಯ ಬ್ಯಾಂಕ್‌ಗಳು ಖಾಸಗಿಯವರ ಪಾಲಾಗುತ್ತಿದೆ. ಮೋದಿ‌ ಸರ್ಕಾರ ಶ್ರೀಮಂತರು, ಉದ್ಯಮಿಗಳು, ಕಾರ್ಪೊರೇಟ್ ಕುಳಗಳ ಪರವಾಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೆ. ಅಡ್ವಾಣಿ, ಮೋದಿ, ಅದಾನಿಯಿಂದ ಈ ದೇಶಕ್ಕೆ‌ಸ್ವಾತಂತ್ರ್ಯ ಬಂದಿಲ್ಲ. ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇದನ್ನು ಕಾರ್ಯಕರ್ತರು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂವಿಧಾನ ಉಳಿಸುವ ಕೆಲಸ ಮಾಡಬೇಕು. ಬಿಜೆಪಿಯವರು ಎಂಥಾ ನೀಚರು ಎಂದರೆ ಐದು ಗ್ಯಾರಂಟಿಗಳನ್ನು ಮೋದಿಯೇ ಮಾಡಿದ್ದು ಎಂದು ಹೇಳಬಹುದು. ಕರ್ನಾಟಕದ ಜನರು ಮೋದಿಯವರಿಗೆ ಮಣೆ ಹಾಕದೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸ ಇದೆ ಎಂದರು.

Join Whatsapp
Exit mobile version