Home ಕರಾವಳಿ ಮಂಗಳೂರು | ಅನೈತಿಕ ಗೂಂಡಾಗಿರಿಗೆ ಸಿಎಂ ಬೊಮ್ಮಾಯಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

ಮಂಗಳೂರು | ಅನೈತಿಕ ಗೂಂಡಾಗಿರಿಗೆ ಸಿಎಂ ಬೊಮ್ಮಾಯಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

ಮಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ ರೈ, ಮುಖಂಡರಾದ ರಕ್ಷಿತ್ ಶಿವರಾಮ್, ಹರೀಶ್ ಕುಮಾರ್, ಕವಿತಾ ಸನಿಲ್, ಐವನ್ ಡಿಸೋಜಾ ಸೇರಿದಂತೆ ಹಲವು ಮುಖಂಡರು ಸ್ವಾಗತಿಸಿದರು.


ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅನೈತಿಕ ಪೊಲೀಸ್’ಗಿರಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ರಾಜ್ಯದ ಮುಖ್ಯಮಂತ್ರಿಯೇ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಹೇಳಿಕೆ ನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಹೇಳಿದರು.


ಮಂಗಳೂರಿನಲ್ಲಿ ಎರಡು ತಿಂಗಳ ಅವಧಿಯಲ್ಲಿ ಏಳೆಂಟು ಅನೈತಿಕ ಗೂಂಡಾಗಿರಿ ನಡೆದಿದೆ. ಇದರ ವಿರುದ್ಧ ಕಠಿಣವಾದ ಕಾನೂನು ಕ್ರಮ ವಹಿಸಬೇಕು. ಆ ರೀತಿ ಅನೈತಿಕ ಗೂಂಡಾಗಿರಿಗೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಮುಖ್ಯಮಂತ್ರಿಗೆ ಕಾನೂನು ಗೊತ್ತಿದೆಯೋ ಗೊತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸರು ಇರುವುದು. ಸರಕಾರ ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಇದಕ್ಕೆ ಪ್ರೋತ್ಸಾಹ ನೀಡುವ ರೀತಿ ಹೇಳಿಕೆ ನೀಡಿದರೆ ಏನಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.


ಬಳಿಕ ಸಿದ್ದರಾಮಯ್ಯ ಬೆಳ್ತಂಗಡಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದರು.

Join Whatsapp
Exit mobile version