Home ಟಾಪ್ ಸುದ್ದಿಗಳು ಮಂಗಳೂರು | ಬಿಜೆಪಿ, ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬಿಕೆ ಹರಿಪ್ರಸಾದ್

ಮಂಗಳೂರು | ಬಿಜೆಪಿ, ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬಿಕೆ ಹರಿಪ್ರಸಾದ್

ಮಂಗಳೂರು: ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬೇರೆಯವರಿಗೆ ಕಲ್ಲು ಹೊಡೆಯುವ ಮೊದಲು ಅವರು ಗಾಜಿನ ಮನೆಯಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕು. ಮುಡಾದಲ್ಲಿ ಹಗರಣ ಆಗಿದೆಯೋ ಗೊತ್ತಿಲ್ಲ, ಆದರೆ ಆಪಾದನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಅದರಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಬಿಜೆಪಿ, ಸಂಘಪರಿವಾರ ಹಾಗೂ ಕಾಂಗ್ರೆಸ್‌ ವಿರೋಧಿಗಳು ಈ ಕೆಲಸ ಮಾಡುತ್ತಿದ್ದಾರೆ. 2 ಜಿ, 3 ಜಿ ನಡೆದು 10 ವರ್ಷ ಕಳೆದಿದ್ದು, ಯಾರನ್ನಾದರೂ ಜೈಲಿಗೆ ಕಳುಹಿಸಿದ್ದಾರಾ? ಬಿಜೆಪಿಯ ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನತೆ ಉತ್ತರ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುವುದಿಲ್ಲ. ಇದನ್ನು ರಾಹುಲ್‌ ಗಾಂಧಿ  ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಎಂದು ಹೇಳಿದ್ದಾರೆ. ಪಕ್ಷ ಕಾಲಕಾಲಕ್ಕೆ ಯಾವ್ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು ಎಂದರು.

ಬಿಜೆಪಿ ವಿರುದ್ದ ಶೇ.40 ಕಮಿಷನ್‌ ಆರೋಪದ ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಸಿಎಂ, ಡಿಸಿಎಂ ಮತ್ತು ಸಚಿವರನ್ನು ಕೇಳಬೇಕು. ಅವರೇ ಉತ್ತರಿಸುತ್ತಾರೆ. ನಾನು ಸರಕಾರದಲ್ಲಿ ಇಲ್ಲ ಎಂದರು.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯು ತೆರಳದೆ ಇರುವುದನ್ನು ಇದೇ ವೇಳೆ ಹರಿಪ್ರಸಾದ್ ಸಮರ್ಥಿಸಿದರು. ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಯವರ ತಾಳಕ್ಕೆ ತಕ್ಕಂತೆ ಇರುವುದು. ನೀತಿ ಆಯೋಗ ಸರಿ ಇದ್ದರೆ ಬಜೆಟ್‌ನಲ್ಲಿ ಅತಿ ಹೆಚ್ಚು ತೆರಿಗೆ ಮೂಲಕ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು ಎಂದರು.

Join Whatsapp
Exit mobile version