ಮಂಗಳೂರು: ನಗರದ ಫಳ್ನೀರ್ ಫ್ಲ್ಯಾಟ್ ನಲ್ಲಿ ವಿವಾಹಿತೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಸಂಶಯ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಪತಿ ಮತ್ತು ಅತ್ತೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ಹಫೀಫಾ (26) ಅವರ ಪತಿ ಶಾಬಾನ್ ಮಿಶಾಬ್ ಮತ್ತು ಆತನ ತಾಯಿ ರಝಿಯಾ ವಿರುದ್ಧ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಜನವರಿ 30ರಂದು ನಗರದ ಬಂದರ್ ಕಸೈಗಲ್ಲಿ ನಿವಾಸಿ ಎಂ. ಹಸನಬ್ಬ ಅವರ ಪುತ್ರಿ ಆಯಿಶಾ ಹಫೀಫಾ ನಿಗೂಢವಾಗಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ಹೇಳಲಾಗಿತ್ತು.
ಮಗಳ ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಅತ್ತೆ ಮತ್ತು ಅಳಿಯ ಸೇರಿ ತನ್ನ ಮಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ನಂತರ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಹಾಗಾಗಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತಳ ತಂದೆ ಹಸನಬ್ಬ ಅವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮಗಳನ್ನು ಯಾಕಾಗಿ ಕೊಂದ ಎಂಬುದು ಬಹಿರಂಗಗೊಳ್ಳಲಿ: ಪೋಷಕರ ಒತ್ತಾಯ
ಕಳೆದ ಭಾನುವಾರ ಬೆಳಗ್ಗೆ 11.36ಕ್ಕೆ ನನ್ನ ಮಗಳು ತಾಯಿಗೆ ಕರೆ ಮಾಡಿ ಮಾತನಾಡಿದ್ದಳು. ಇನ್ನೆರಡು ಮೂರು ದಿನಗಳಲ್ಲಿ ಮಗಳು ಮತ್ತು ಅಳಿಯ ದುಬೈಗೆ ಹೋಗುವವರಿದ್ದರು. ಬಹಳ ಸಂತೋಷದಲ್ಲಿದ್ದ ಮಗಳನ್ನು ಕಂಡು ನನ್ನ ಹೃದಯ ತುಂಬಿ ಬಂದಿತ್ತು. ಆಕೆ ಹಿಂದೆಂದೂ ಅಷ್ಟು ಸಂತೋಷದಲ್ಲಿ ಇದ್ದಿದ್ದನ್ನು ನಾನು ಕಂಡಿರಲಿಲ್ಲ. ಆದರೆ ಬೆಳಗ್ಗೆ 11.56ಕ್ಕೆ ಅಳಿಯ ನನ್ನ ಮಗನಿಗೆ ಕರೆ ಮಾಡಿ ‘ತುರ್ತಾಗಿ ಮನೆಗೆ ಬಾ, ಆಯಿಶಾ ಹಫೀಫಾ ಕೊಠಡಿಯ ಬಾಗಿಲು ತೆರೆಯುತ್ತಿಲ್ಲ’ ಎಂದು ತಿಳಿಸಿದ್ದಾನೆ. ತಕ್ಷಣ ನನ್ನ ಮಗ ಫಳ್ನೀರ್ ನಲ್ಲಿರುವ ಮಗಳ ಮನೆಗೆ ಹೋಗಿ ನೋಡಿದಾಗ, ಮಗಳನ್ನು ಸೋಫಾದ ಮೇಲೆ ಮಲಗಿಸಲಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಅಳಿಯ ಮತ್ತು ಆತನ ತಾಯಿ ಹೇಳಿದ್ದಾರೆ.
ತಕ್ಷಣ ನನ್ನ ಮಗ ತಂಗಿಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ವೇಳೆ ಅಳಿಯ ಬೈಕ್ ನಲ್ಲಿ ಆಟೋವನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ವಿಷಯ ತಿಳಿದು ನಾನು ತಕ್ಷಣ ಆಸ್ಪತ್ರೆಗೆ ಹೋಗಿ ಮಗಳನ್ನು ನೋಡಿದಾಗ ನಾನು ಕುಸಿದು ಹೋದೆ. ಅರ್ಧ ಗಂಟೆ ಮೊದಲು ಮಾತನಾಡಿದ್ದ ನನ್ನ ಮಗಳು ಶವವಾಗಿ ಆಸ್ಪತ್ರೆಯಲ್ಲಿದ್ದಳು. ಏನು ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದ್ದೆ. ಬಳಿಕ ಪೊಲೀಸರು ಬಂದು ಕಾನೂನು ಪ್ರಕಾರ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದರು.
ಆಗ ನಾನು ಮಾನಸಿಕವಾಗಿ ಕುಸಿದು ಹೋಗಿದ್ದೆ. ಯಾರ ವಿರುದ್ಧವೂ ಸಂಶಯ ವ್ಯಕ್ತಪಡಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಮಗಳ ಅಂತ್ಯಸಂಸ್ಕಾರದಲ್ಲಿ ದುಃಖದಿಂದಲೇ ಭಾಗವಹಿಸಿದೆ. ಪೊಲೀಸರು ಅಸ್ವಾಭಾವಿಕ ಮರಣ(ಯುಡಿಆರ್) ಎಂದು ಪ್ರಕರಣ ದಾಖಲಿಸಿದ್ದರು.
ಇದಾದ ಬಳಿಕ ಎರಡು ದಿನಗಳ ಬಳಿಕ ನಾನು ಮಾನಸಿಕವಾಗಿ ಸುಧಾರಿಸಿಕೊಳ್ಳಲು ಪ್ರಯತ್ನಿಸಿದೆ. ಆದರೂ ಮಗಳ ಅಗಲಿಕೆಯ ನೋವು ನನ್ನನ್ನು ಹಿಂಡಿ ಹಿಪ್ಪೆಯನ್ನಾಗಿಸಿತ್ತು. ಇಷ್ಟರಲ್ಲೇ ಮಗಳ ಸಾವಿನ ಬಗ್ಗೆ ಹಲವು ಸಂಶಯಗಳು ಬೆಳಕಿಗೆ ಬಂದಿದ್ದವು. ಆಕೆಯದ್ದು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವವಲ್ಲ ಎಂಬುದು ನನ್ನ ದೃಢ ನಂಬಿಕೆಯಾಗಿತ್ತು. ಅದು ಸುಳ್ಳಾಗಲಿಲ್ಲ, ಉನ್ನತ ಶಿಕ್ಷಣ ಪಡೆದು ದುಬೈಯಲ್ಲಿ ಕೆಲಸಕ್ಕೆ ಸೇರಲಿದ್ದ ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ನನ್ನ ಒಳಮನಸ್ಸು ದೃಢವಾಗಿ ಹೇಳುತ್ತಿತ್ತು.
ಅದರಂತೆ ನಾನು ವಾಸ್ತವ ಸ್ಥಿತಿಯೆಡೆಗೆ ಮರಳಿದಾಗ ಮತ್ತೆ ತಹಶೀಲ್ದಾರ್ ಬಳಿ ಹೋಗಿ ನನ್ನ ಮಗಳ ಸಾವಿನ ಬಗ್ಗೆ ನನಗಿರುವ ಅನುಮಾನಗಳನ್ನು ವ್ಯಕ್ತಪಡಿಸಿದೆ. ಈ ಹಿಂದೆಯೇ ತಹಶೀಲ್ದಾರ್ ನನ್ನಲ್ಲಿ ಏನಾದರೂ ಸಂಶಯಗಳಿದೆಯೇ ಎಂದು ಕೇಳಿದ್ದರು. ಆದರೆ ನನಗೆ ಆ ಸಂದರ್ಭದಲ್ಲಿ ಏನನ್ನೂ ಹೇಳಲು ಸಾಧ್ಯವಾಗಿರಲಿಲ್ಲ. ಎರಡು ದಿನಗಳ ಬಳಿಕ ನನ್ನ ನೋವನ್ನು ಅವರಲ್ಲಿ ತೋಡಿಕೊಂಡಾಗ ಅವರು ಸಾವಿನ ಪ್ರಕರಣದ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದರು. ನನ್ನ ಹೇಳಿಕೆಗಳನ್ನು ಪಡೆದುಕೊಂಡ ಪಾಂಡೇಶ್ವರ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನನ್ನ ಮಗಳ ಪರಿಸ್ಥಿತಿ ಜಗತ್ತಿನ ಯಾವ ಮಗಳಿಗೂ ಆಗಬಾರದು. ಯಾಕಾಗಿ ಆಕೆಯನ್ನು ಹತ್ಯೆ ಮಾಡಲಾಯಿತು ಎಂಬುದು ನನಗೆ ತಿಳಿಯಬೇಕು. ಭಾರತದ ಕಾನೂನು ಮತ್ತು ಇಲ್ಲಿನ ಪೊಲೀಸರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಖಂಡಿತ ನನ್ನ ಈ ಸಂಶಯವನ್ನು ಅವರು ನಿವಾರಿಸಬಲ್ಲರು ಎಂದು ಹಸನಬ್ಬ ಅವರು “ಪ್ರಸ್ತುತ”ದೊಂದಿಗೆ ಮಾತನಾಡುವಾಗ ಗದ್ಗದಿತರಾದರು.