ಮಂಗಳೂರು: ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಅಭ್ಯರ್ಥಿ ಬೃಜೇಶ್ ಚೌಟ ಪರವಾಗಿ ಬಿಜೆಪಿ ಮೀನುಗಾರ ಪ್ರಕೋಷ್ಟ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಮಂಗಳೂರಿನ ಮುಸ್ಲಿಮ್ ಮತ್ಸ್ಯ ವ್ಯಾಪಾರಿಗಳು ಮತ್ತು ಮೊಗವೀರ ಸಮುದಾಯದ ಮದ್ಯೆ ಮತೀಯ ದ್ವೇಷ ಹಂಚಲು ಪ್ರಯತ್ನಿಸಿದ್ದಾರೆ. ಜನಾಂಗೀಯ ದ್ವೇಷ ಹರಡುವ ಮನಪಾ ಮೇಯರ್ ಸುಧೀರ್ ಶೆಟ್ಟಿಯನ್ನು ತಕ್ಷಣವೇ ವಜಾಗೊಳಿಸಿ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ ಸಂವಿಧಾನದ ಹೆಸರಲ್ಲಿ ಸ್ವೀಕರಿಸಿರುವ ಪ್ರಮಾಣಕ್ಕೆ ವಿರುದ್ಧವಾಗಿ ಜನಾಂಗೀಯ ದ್ವೇಷ ಹರಡುವ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿಯವರನ್ನು ತಕ್ಷಣವೇ ಮೇಯರ್ ಸ್ಥಾನದಿಂದ ವಜಾಗೊಳಿಸಿ. ಪಾಲಿಕೆಯನ್ನು ರಾಜ್ಯ ಸರ್ಕಾರ ಸೂಪರ್ ಸೀಡ್ ಮಾಡಬೇಕು ಎಂದರು.
ಎರಡು ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಹೇಳಿಕೆ ನೀಡಿರುವ ಮಂಗಳೂರು ನಗರದ ಪ್ರಥಮ ಪ್ರಜೆ ಸುಧೀರ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಸೆಕ್ಷನ್ ಗಳಡಿ ಸುಮೋಟೊ ಕೇಸ್ ದಾಖಲಿಸಿ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.