ಪ್ರಯಾಣದ ವೇಳೆ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿ ಬಂಧನ

Prasthutha|

ಬೆಂಗಳೂರು: ಬೆಂಗಳೂರಿಗೆ ಆಗಮನಿಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನದ ಹಿಂಬದಿಯ ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

- Advertisement -

ಪ್ರಯಾಣಿಕನನ್ನು ಆಂಧ್ರಪ್ರದೇಶ ಮೂಲದ ವೆಂಕಟ್ ಮೋಹಿತ್ (29) ಎಂದು ಗುರುತಿಸಲಾಗಿದೆ. ಜುಲೈ 15 ರಂದು ಪ್ಯಾರಿಸ್ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಏರ್ ಫ್ರಾನ್ಸ್ ಎಎಫ್-194 ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಪ್ರಥಮ ಮಾಹಿತಿ ವರದಿ (FIR) ತಿಳಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಳಿಯುವ ನಾಲ್ಕು ಗಂಟೆಗಳ ಮೊದಲು, ರಾತ್ರಿ 8 ಗಂಟೆಯ ಸುಮಾರಿಗೆ ಆರೋಪಿ ಮೋಹಿತ್, ವಿಮಾನದ ಹಿಂಭಾಗದ ಎಡಭಾಗದಲ್ಲಿರುವ ಬಾಗಿಲಿನ ಲೀವರ್ ಎತ್ತಲು ಪ್ರಯತ್ನಿಸಿದರು ಎಂದು ಏರ್ ಫ್ರಾನ್ಸ್ ಇಂಡಿಯಾ ಅಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

- Advertisement -

ಈ ಬಗ್ಗೆ ವಿಮಾನದ ಸಿಬ್ಬಂದಿ ವರದಿ ಸಲ್ಲಿಸಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೋಹಿತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಮತ್ತು ವಿಮಾನ ನಿಯಮಗಳ 29 (ವಿಮಾನದ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version