ಬೆಂಗಳೂರು: ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ದುರ್ಘಟನೆ ಆನೇಕಲ್ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ.
ಹೂವಾಡಿಗಾರ ಬೀದಿಯ ಪ್ರೇಮಾ (25) ಕೊಲೆಯಾದವರು. ಕೃತ್ಯವೆಸಗಿ ಪರಾರಿಯಾಗಿರುವ ಪತಿ ವೆಂಕಟೇಶಾಚಾರಿ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಕಳೆದ 9 ವರ್ಷಗಳ ಹಿಂದೆ ಪ್ರೇಮಾ ಮತ್ತು ವೆಂಕಟೇಶಾಚಾರಿ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ 7 ವರ್ಷದ ಮಗಳಿದ್ದಾಳೆ. ನಿನ್ನೆ ರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ಪತ್ನಿ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದ ವೆಂಕಟೇಶಾಚಾರಿ ರೊಚ್ಚಿಗೆದ್ದು ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಪತ್ನಿಯ ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪ್ರೇಮಾ ಅವರನ್ನು ಅಕ್ಕಪಕ್ಕದ ಮನೆಯವರು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.
ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಶೋಧ ಕೈಗೊಂಡಿದ್ದಾರೆ.