ಪಾಟ್ನಾ: ಪಾನ್ ತಿಂದು ಉಗುಳಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಘಟನೆ ಬಿಹಾರದ ಸಿವಾನ್ ಜಿಲ್ಲೆಯಿಂದ ವರದಿಯಾಗಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಪುರಾಣಿ ಕಿಲಾ ಪೋಖ್ರಾದಲ್ಲಿ ಗಾರ್ಮೆಂಟ್ ಮಾರಾಟಗಾರನನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿದೆ.
ಮೃತರನ್ನು ಶಾಮ್ಲಿ ಮೂಲದ ನವಾಬ್ ಹಸನ್ ಎಂದು ಗುರುತಿಸಲಾಗಿದ್ದು, ಸಿವಾನ್ ನಲ್ಲಿ ಬೀದಿಬದಿ ವ್ಯಾಪಾರ ನಿರ್ವಹಿಸುತ್ತಿದ್ದರು. ನವಾಬ್ ಎಂಬವರು ಬೆಳಗ್ಗೆ ಮನೆಯೊಳಗೆ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಪಾನ್ ತಿಂದು ಕಿಟಕಿಯಿಂದ ಉಗಿದ ವೇಳೆ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಎರಚಿದ ಹಿನ್ನಲೆಯಲ್ಲಿ ಆತನನ್ನು ನಿಂದಿಸಿ ಗುಂಡಿಕ್ಕೆ ಹತ್ಯೆ ನಡೆಸಲಾಗಿದೆ ಎಂದು ಸರಾಯ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಸ್.ಪಿ ಸಾಹು ತಿಳಿಸಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ನವಾಬ್ ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.