ಬೆಂಗಳೂರು: ತೆಲುಗು ಚಿತ್ರ ಗೀತಾ ಗೋವಿಂದಂ ಸಿನಿಮಾ ಶೈಲಿಯಲ್ಲೇ ಬಸ್ ನಲ್ಲಿ ಯುವತಿಗೆ ಮುತ್ತು ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಳ್ಳಾರಿಯವನಾಗಿದ್ದು, ಪ್ರಸ್ತುತ ವಿಜಯನಗರದಲ್ಲಿ ನೆಲೆಸಿರುವ ಮಧುಸೂದನ್ ರೆಡ್ಡಿ (25) ಬಂಧಿತ ಆರೋಪಿ.
ಬಿಇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ನಿಮ್ಮಿತ್ತ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಧುಸೂದನ್ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ಬಳಿಕ ಯುವತಿ ನಿದ್ದೆಗೆ ಜಾರಿದ್ದಳು. ಸೆ.13ರ ಬೆಳಗಿನ ಜಾವ ಟಿ.ದಾಸರಹಳ್ಳಿ ಬಳಿ ಬಸ್ ಬಂದಾಗ ಮಲಗಿದ್ದ ಯುವತಿ ಕೆನ್ನೆಗೆ ಚುಂಬಿಸಿದ್ದ. ಇದರಿಂದ ಎಚ್ಚರಗೊಂಡ ಯುವತಿ ಮುತ್ತು ಕೊಟ್ಟವರು ಯಾರು ಎಂದು ನೋಡವಷ್ಟರಲ್ಲೇ ಯುವಕ ಬಸ್ ನಿಂದ ಇಳಿದು ಪರಾರಿಯಾಗಿದ್ದ.
ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಸ್ ಗೆ ಯಾರೆಲ್ಲ ಹತ್ತಿದ್ದರು ಎಂಬುದರ ಬಗ್ಗೆ ಸಿಸಿ ಕ್ಯಾಮೆರಾ ಮತ್ತು ಬಸ್ ಟಿಕೆಟ್ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಸದ್ಯ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.