ಬೆಂಗಳೂರು: ಅಸಭ್ಯ ವರ್ತನೆ ತೋರಿದ್ದನ್ನು ವಿರೋಧಿಸಿ ಪೋಷಕರಿಗೆ ತಿಳಿಸಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದಾಸನಪುರ ಹೋಬಳಿಯ ಜಿಂದಾಲ್ ಕ್ವಾಟ್ರಸ್ ನಲ್ಲಿ ನಡೆದಿದೆ.
ಜಿಂದಾಲ್ ಕ್ವಾಟ್ರಸ್ ನ 11 ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಂದ ಹರಿಯಾಣ ಮೂಲದ ನಂದಕಿಶೋರ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಲೆಯಾದ ಬಾಲಕಿಯ ತಂದೆಯು ಕಳೆದ 20 ವರ್ಷಗಳಿಂದ ಜಿಂದಾಲ್ ನಗರದಲ್ಲಿ ವಾಸವಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ನಂದಕಿಶೋರ್ ಮತ್ತು ಬಾಲಕಿಯ ತಂದೆ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ನಂದಕಿಶೋರ್ ಕೊಲೆಯಾದ ಬಾಲಕಿಯ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಈ ಬಗ್ಗೆ ಬಾಲಕಿಯ ತಂದೆ ನಂದಕಿಶೋರ್ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಸಹ ಆಗಿತ್ತು. ನಂತರ ಸಂತ್ರಸ್ತೆಯ ತಂದೆ ಜಿಂದಾಲ್ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಿದ್ದರು. ಸಂಘದ ಮುಖಂಡರು 15 ದಿನದೊಳಗೆ ಮನೆ ಖಾಲಿ ಮಾಡುವಂತೆ ನಂದಕಿಶೋರ್ ಗೆ ನೋಟಿಸ್ ನೀಡಿದ್ದು ಎರಡು ದಿನಗಳ ಹಿಂದೆ ಬಾಲಕಿ ಆಟ ಆಡಲೆಂದು ಹೊರಗೆ ಬಂದಾಗ, ಬಾಲಕಿಯ ಎದುರು ನಂದಕಿಶೋರ್ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.
ಬಾಲಕಿ ಮೃತಪಟ್ಟಿದ್ದನ್ನು ಕಂಡು ಹೆದರಿ ತಾನೂ ನೇಣಿಗೆ ಶರಣಾಗಿದ್ದು ಈ ಸಂಬಂಧ ಮಾದನಾಯ್ಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.