Home ಟಾಪ್ ಸುದ್ದಿಗಳು ಕಡಿಮೆ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಾಡಿಸಿಕೊಡುತ್ತಿದ್ದ ವ್ಯಕ್ತಿ ಬಂಧನ

ಕಡಿಮೆ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಾಡಿಸಿಕೊಡುತ್ತಿದ್ದ ವ್ಯಕ್ತಿ ಬಂಧನ

ಬೆಂಗಳೂರು: ನಿಗದಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿಸುತ್ತಿದ್ದ ಖತರ್ನಾಕ್ ಏಜೆಂಟ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚತುರ್ ಕೆ.ಎಸ್.ಬಂಧಿತ ಆರೋಪಿಯಾಗಿದ್ದು, ಈತನ ಜೊತೆ ಕೃತ್ಯದಲ್ಲಿ ತೊಡಗಿ ಪರಾರಿಯಾಗಿರುವ ಮಣ್ಣೂರು ನಾಗರಾಜ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.


ಬಂಧಿತ ಆರೋಪಿಗಳಿಂದ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್’ಗಳು, ಹಾರ್ಡ್ ಡಿಸ್ಕ್’ಗಳು, ವೃದ್ಧಾಪ್ಯ ವೇತನ ಮಂಜೂರು ಮಾಡುವ ನಕಲಿ ದಾಖಲಾತಿಗಳನ್ನು ಜಪ್ತಿ ಮಾಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿದ್ದ ವಂಚನೆಯನ್ನು ತಪ್ಪಿಸಲಾಗಿದೆ ಎಂದು ಹೇಳಿದರು.
ನಗರದ ಮೂರು ಕಡೆ ಸಿಸಿಬಿ ಪೊಲೀಸರು ನಡೆಸಿದ ದಾಳಿಯ ವೇಳೆ 200 ಹೆಚ್ಚು ಮಂದಿ ನಕಲಿ ವೃದ್ದಾಪ್ಯ ವೇತನ ಪಡೆಯುತ್ತಿರುವುದು ಪತ್ತೆಯಾಗಿದೆ.
ಈ ಏಜೆಂಟ್’ಗಳು ಹೆಚ್ಚು ಹಣವನ್ನು ಪಡೆದು ವೃದ್ಧರಲ್ಲದವರಿಗೂ, ನಿಗದಿತ ವಯಸ್ಸಿನ ವ್ಯಕ್ತಿಗಳಿಗೂ ಆಧಾರ್’ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಮಾಡಿಸಿ ವೃದ್ಧಾಪ್ಯ ವೇತನ ಸಿಗುವಂತೆ ಮಾಡುತ್ತಿದ್ದರು.


ಆಧಾರ್ ಕಾರ್ಡ್ ನಕಲಿ:
ಆಧಾರ್ ಕಾರ್ಡ್ನಲ್ಲಿ ವಯಸ್ಸಿನ ಲೆಕ್ಕವನ್ನು ಕಡಿಮೆ ಮಾಡುತ್ತಿದ್ದರು. ಈ ಏಜೆಂಟ್’ಗಳು ರಾಜಾಜಿನಗರ, ಕೆಂಗೇರಿ ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಚತುರ್ ಓರ್ವರಿಗೆ ನಕಲಿ ಮಾಡುವ ಕೆಲಸ ಮಾಡಿಸಿಕೊಡಲು 5 ರಿಂದ ಹತ್ತು ಸಾವಿರ ಹಣ ಪಡೆಯುತ್ತಿದ್ದು, ನಗರದದಲ್ಲಿ ಹಲವೆಡೆ ಇದೇ ರೀತಿ ಕೃತ್ಯ ನಡೆದಿರುವ ಸಾದ್ಯತೆ. ಇದ್ದು ಈಗಾಗಲೇ ಹಲವಾರು ಸರ್ಕಾರಿ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ.
ರೆವಿನ್ಯೂ ಇನ್ಸ್’ಪೆಕ್ಟರ್ ಹಾಗು ವಿಲೇಜ್ ಅಕೌಂಟೆಂಟ್’ಗಳಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು ಏಜೆಂಟ್ ಜತೆ ಶಾಮೀಲಾಗಿ ಕೃತ್ಯ ಎಸಗಿದ್ದಾರಾ ಎನ್ನುವುದರ ಬಗ್ಗೆ ಕೂಡ ಪರಿಶೀಲನೆ ಎಂದು ಶರಣಪ್ಪ ತಿಳಿಸಿದ್ದಾರೆ.

Join Whatsapp
Exit mobile version