ಬೆಂಗಳೂರು: ಓಎಲ್ ಎಕ್ಸ್ ನಲ್ಲಿ ಜಾಹೀರಾತು ನೋಡಿ ಕಾರು ಖರೀದಿಸುವುದಾಗಿ ಮಾಲೀಕರಿಗೆ ನಂಬಿಸಿ ಟೆಸ್ಟ್ ಡ್ರೈವ್ ತೆಗೆದುಕೊಂಡು ಹೋಗಿ ಬ್ರಿಜ್ಜಾ ಕಾರು ಸಮೇತ ಪರಾರಿಯಾಗಿದ್ದ ಖದೀಮನೊಬ್ಬನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತನಗರದ ವೆಂಕಟೇಶ್ (36)ಬಂಧಿತ ಆರೋಪಿಯಾಗಿದ್ದು, ಆತನಿಂದ ಮಾರುತಿ ವಿಟೆರಾ ಬ್ರಿಜ್ಜಾ ಕಾರು,ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ. ಹೆಬ್ಬಾಳ-ಕೆಂಪಾಪುರದ ರವೀಂದ್ರ ಅವರು ಕೆಎ 04 ಎಂಆರ್ 9378 ನಂ ಬ್ರಿಜ್ಜಾ ಕಾರು ಮಾರಟಕ್ಕಿದೆ ಎಂದು ಓಎಲ್ಎಕ್ಸ್ ನಲ್ಲಿ ಜಾಹೀರಾತು ಹಾಕಿದ್ದರು. ಕಾರು ಬೇಕಿದೆ ಎಂದು ಆರೋಪಿ ವೆಂಕಟೇಶ್, ರವೀಂದ್ರ ಅವರನ್ನು ಸಂಪರ್ಕಿಸಿದ್ದನು.
ಅದರಂತೆ ಕಳೆದ ಜ. 30 ರಂದು ಕಾರು ಖರೀದಿಗಾಗಿ ಬಂದಿದ್ದ ಆರೋಪಿ ಟೆಸ್ಟ್ ಡ್ರೈವ್ ಎಂದು ನಂಬಿಸಿ ಹೊರಟು ಕಾರು ಸಮೇತ ಪರಾರಿಯಾಗಿದ್ದನು. ಕಾರು ಕಳೆದುಕೊಂಡು ಕಂಗಾಲಾಗಿದ್ದ ರವೀಂದ್ರ ಅಮೃತಹಳ್ಳಿ ಠಾಣೆಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವೆಂಕಟೇಶ್ ನಾಯ್ಕ್ ಬಾಗೇಪಲ್ಲಿ ಮೂಲದವನಾಗಿದ್ದು, ತನ್ನ ಪತ್ನಿಯನ್ನು ಗ್ರಾಮಪಂಚಾಯ್ತಿ ಚುನಾವಣೆಗೆ ನಿಲ್ಲಿಸಿ ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದನು.
ಅದಕ್ಕಾಗಿ ತನ್ನ ಬಳಿಯಿದ್ದ ಗ್ರೇ ಬಣ್ಣದ ಬ್ರಿಜ್ಜಾ ಕಾರು ಮಾರಾಟ ಮಾಡಿದ್ದನು. ಆದರೆ ದುರಾದೃಷ್ಟಕ್ಕೆ ವೆಂಕಟೇಶ್ ಪತ್ನಿ ಚುನಾವಣೆಯಲ್ಲಿ ಸೋತಿದ್ದಳು. ಕಾರು ಇಲ್ಲ ಅಂದರೆ ಊರಲ್ಲಿ ಅವಮಾನ ಆಗಲಿದೆ ಎಂದುಕೊಂಡು ಅದೇ ಬಣ್ಣದ ಕಾರು ಕಳವಿಗೆ ಸಂಚು ಮಾಡಿದ್ದನು.
ಓಎಲ್ಎಕ್ಸ್ ನಲ್ಲಿ ಹುಡುಕಾಡಿ ಕಾರು ಮಾಲೀಕನನ್ನು ಸಂಪರ್ಕ ಮಾಡಿದ್ದನು. ಕದ್ದ ಮೊಬೈಲ್ ನಲ್ಲಿ ಮಾಲೀಕನಿಗೆ ಕರೆ ಮಾಡಿದ್ದನು. ಕೃತ್ಯಕ್ಕಾಗಿಯೇ ಮೊಬೈಲ್ ಕಳ್ಳತನಕ್ಕೆ ಕೈ ಹಾಕಿದ್ದನು. ಕಾರು ಖರೀದಿಸಲು ಬರುವಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿ ಬೇರೆ ಬೇರೆಯವರ ಬಳಿ ಮೊಬೈಲ್ ಪಡೆದು ಮಾಲೀಕನಿಗೆ ಕರೆ ಮಾಡಿದ್ದನು. ನಂತರ ಬಂದು ಕೀ ಪಡೆದು ಕಾರಿನ ಜೊತೆಗೆ ಪರಾರಿಯಾಗಿದ್ದನು. ಆರೋಪಿಯನ್ನು ಬಂಧಿಸಿಲು, ಎರಡೂವರೆ ಸಾವಿರ ಓಎಲ್ಎಕ್ಸ್ ಐಪಿ ವಿಳಾಸ ಅಡ್ರೆಸ್ ಜಾಲಾಡಿದ್ದ ಪೊಲೀಸರು, ತಾಂತ್ರಿಕ ಮಾಹಿತಿಯನ್ನು ಆಧರಿಸಿ ಆಧರಿಸಿ ಆರೋಪಿ ಬಂಧಿಸುವಲ್ಲಿ ಎಸಿಪಿ ರಂಗಪ್ಪ ನೇತೃತ್ವದ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಶೆಟ್ಟಿ ತಿಳಿಸಿದರು.