Home ಟಾಪ್ ಸುದ್ದಿಗಳು ಪೆಗಾಸಸ್ ಕಣ್ಗಾವಲು: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಮದನ್ ಲೋಕೂರ್ ನೇತೃತ್ವದಲ್ಲಿ ಸಮಿತಿ ರಚಿಸಿದ ಮಮತಾ...

ಪೆಗಾಸಸ್ ಕಣ್ಗಾವಲು: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಮದನ್ ಲೋಕೂರ್ ನೇತೃತ್ವದಲ್ಲಿ ಸಮಿತಿ ರಚಿಸಿದ ಮಮತಾ ಸರ್ಕಾರ

ಕೋಲ್ಕತ್ತ ಜು.26: ಇಸ್ರೇಲ್ ಮೂಲದ ಗೂಢಚಾರಿಕಾ ತಂತ್ರಾಂಶ ಸಂಸ್ಥೆ ಎನ್ ಎಸ್ ಒ ಅಭಿವೃದ್ಧಿಪಡಿಸಿರುವ ಪೆಗಾಸಸ್ ಸಾಫ್ಟ್ ವೇರ್ ನೆರವಿನಿಂದ ಭಾರತೀಯ ವಕೀಲರು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು, ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಇತರರ ಮೇಲೆ ನಿಗಾ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಹಗರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದ ಇಬ್ಬರು ಸದಸ್ಯರ ತನಿಖಾ ಆಯೋಗವನ್ನು ಪಶ್ಚಿಮ ಬಂಗಾಳ ಸರ್ಕಾರ ರಚಿಸಿದೆ.
ಕಲ್ಕತ್ತಾ ಹೈಕೋರ್ಟ್ನ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರೂ ತನಿಖಾ ಆಯೋಗದಲ್ಲಿದ್ದಾರೆ. ತನಿಖಾ ಆಯೋಗ ರಚನೆ ವಿಚಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಪ್ರಕಟಿಸಿದರು.


ಇಸ್ರೇಲ್ ಮೂಲದ ಎನ್ ಎಸ್ ಒ ಎಂಬ ಸ್ಪೈವೇರ್ ಸಂಸ್ಥೆಯು ‘ಪೆಗಾಸಸ್ʼ ಎಂಬ ಗೂಢಚಾರಿಕಾ ತಂತ್ರಾಂಶಕ್ಕೆ (ಸ್ಪೈವೇರ್) ಕುಖ್ಯಾತಿಯಾಗಿದೆ. ಪರಿಶೀಲನೆಗೊಳಪಟ್ಟ ಸರ್ಕಾರಗಳಿಗೆ ಮಾತ್ರವೇ ಅದು ಸ್ಪೈವೇರ್ ಮಾರಾಟ ಮಾಡುತ್ತಿದ್ದು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ. ಅಲ್ಲದೇ, ಯಾವ ಸರ್ಕಾರಕ್ಕೆ ತಾನು ಈ ವಿವಾದಾತ್ಮಕ ಉತ್ಪನ್ನವನ್ನು ಮಾರಾಟ ಮಾಡಿದ್ದೇನೆ ಎಂದೂ ಅದು ತಿಳಿಸುವುದಿಲ್ಲ.


ರಾಜಕೀಯ ಎದುರಾಳಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಮೇಲೆ ನಿಗಾ ಇಡಲು ಭಾರತ ಸರ್ಕಾರ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಸರ್ಕಾರಗಳು ಪೆಗಾಸಸ್ ಸಾಫ್ಟ್ವೇರ್ ನೆರವು ಪಡೆದಿವೆ ಎಂದು ಭಾರತದ ʼದಿ ವೈರ್ʼ ಸೇರಿದಂತೆ ವಿಶ್ವದ ಹದಿನಾರು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಒಕ್ಕೂಟ ತನಿಖಾ ವರದಿ ಪ್ರಕಟಿಸಿವೆ.


ಆಯ್ದ ಮೊಬೈಲ್ ಸಂಖ್ಯೆಗಳ ಮೇಲೆ ನಿರ್ದಿಷ್ಟವಾಗಿ ಗುರಿ ಇರಿಸಲಾಗಿತ್ತು. ಕೆಲವು ನಂಬರ್ಗಳಿಗೆ ಪೆಗಾಸಸ್ ದಾಳಿ ಇಟ್ಟಿದ್ದು, ಮತ್ತೆ ಕೆಲವು ನಂಬರ್ಗಳ ಮೇಲೆ ದಾಳಿ ಯತ್ನ ನಡೆದಿದೆ ಎಂದು ಅದರ ವಿಶ್ಲೇಷಣೆ ನಡೆಸಿದ್ದ ಅಮ್ನೆಸ್ಟಿ ಇಂಟರ್ನ್ಯಾಷನಲ್ ತಂಡ ಹೇಳಿತ್ತು.
(ಕೃಪೆ: ಬಾರ್ ಆಂಡ್ ಬೆಂಚ್)

Join Whatsapp
Exit mobile version