ಪಣಜಿ: ಮುಂಬರುವ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘಟಿತ ಕಾರ್ಯಯೋಜನೆ ರೂಪಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದರು.
ಅಕ್ಟೋಬರ್ 28 ರಂದು ಗೋವಾಕ್ಕೆ ಭೇಟಿ ನೀಡಲಿರುವ ಮಮತಾ ಬ್ಯಾನರ್ಜಿ, ದೇಶಕ್ಕೆ ಮಾರಕವಾಗಿರುವ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ರಾಜಕೀಯ ಪಕ್ಷ, ಸಂಘಟನೆ ಮತ್ತು ವ್ಯಕ್ತಿಗಳು ಐಕ್ಯರಾಗುವಂತೆ ಒತ್ತಾಯಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಗೋವಾದ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ ಎಂದು ಬ್ಯಾನರ್ಜಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಟಿ.ಎಂ.ಸಿ. ಯೊಂದಿಗೆ ಕೈಜೋಡಿಸುವಂತೆ ಅವರು ಕರೆ ನೀಡಿದರು.
ಇತ್ತೀಚೆಗೆ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಅಕ್ಟೋಬರ್ 22 ರಂದು ಟಿ.ಎಂ.ಸಿ ಗೋವಾ ಮಾಜಿ ಮುಖ್ಯಮಂತ್ರಿ ಲೂಯಿಝಿನ್ಹೋ ಫಲೈರೊ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದೆ.
ಟಿ.ಎಂ.ಸಿ ಗೋವಾದಲ್ಲಿ ಚುನಾವಣಾ ಪೂರ್ವ ಮೈತ್ರಿಗೆ ಹೋಗುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ತಿಳಿಸಿದರು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಟಿ.ಎಂ.ಸಿ, ಎಲ್ಲಾ 40 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಅವರು ತಿಳಿಸಿದರು