ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಭಜನೆಗೆ ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಜಂಗ್ಲೆಮಹಲ್ ಪ್ರದೇಶದಿಂದ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸಬೇಕೆಂದು ಅಲಿಪುರ್ದಾರ್ ಬಿಜೆಪಿ ಸಂಸದ ಜಾನ್ ಬಾರ್ಲಾ ಒತ್ತಾಯಿಸಿದ್ದನ್ನು ಉಲ್ಲೇಖಿಸಿ, ಪಶ್ಚಿಮ ಬಂಗಾಳವನ್ನು ವಿಭಜಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯನ್ನು ಈ ವೇಳೆ ಟೀಕಿಸಿದ ಮಮತಾ, ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿತ್ತು, ಶೇಕಡಾ 33 ರಷ್ಟಿದ್ಧ ಪಾಸಿಟಿವಿಟಿ ರೇಟ್ ಈಗ ಶೇಕಡಾ 3ಕ್ಕೆ ಬಂದು ತಲುಪಿದೆ. ಉತ್ತರ ಪ್ರದೇಶದಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಿದೆ. ನದಿಗಳ ಮೂಲಕ ನೂರಾರು ಕೋವಿಡ್ ಮೃತ ದೇಹಗಳು ಬಿಹಾರದ ಮೂಲಕ ಬಂಗಾಳಕ್ಕೆ ತೇಲಿ ಬರುತ್ತಿವೆ. ಈ ವ್ಯವಸ್ಥೆಯ ಬಗ್ಗೆ ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.