ಹಾವೇರಿ: ಕಿರಾಣಿ ಅಂಗಡಿ ನೀಡುವ ಸೇವೆ ಮಾಲ್’ಗಳು ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕಿರಾಣಿ ವ್ಯಾಪಾರಸ್ಥರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾಲ್’ಗಳು ಶಾಪಿಂಗ್ ಕಾಂಪ್ಲೆಕ್ಸ್’ಗಳು ಬಂದಿವೆ. ಸ್ವಲ್ಪ ದಿನ ವ್ಯಾಪಾರ ಚೆನ್ನಾಗಿ ಆದರೂ ಸ್ವಲ್ಪ ದಿನಗಳಲ್ಲಿ ಕಡಿಮೆಯಾಗುತ್ತದೆ ಏನೇ ಬಂದರೂ ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ. ಕಾಳು ಕಡಿ ಕೊಳ್ಳುವವರು ಹೆಚ್ಚಿದ್ದಾರೆ, ದರ ಮತ್ತು ತೂಕ ಸರಿಯಾಗಿ ನೀಡಿದರೆ ಗ್ರಾಹಕರು ಸಂತೋಷದಿಂದಿರುತ್ತಾರೆ ದರು.
ಶಿಗ್ಗಾಂವ್ ಸುತ್ತಮುತ್ತಲಲ್ಲಿ ಕಿರಾಣಿ ಅಂಗಡಿಗಳು ಸೇವೆ ಮಾಡಿಕೊಂಡು ಬಂದಿವೆ. ಹಳ್ಳಿಯ ಜನ ಮಾರುಕಟ್ಟೆಗೆ ಬಂದಾಗ ಅವರಲ್ಲಿ ಇಂಥ ಕಡೆ ತೂಕ, ಗುಣಮಟ್ಟ ಸರಿ ಇರುತ್ತದೆ ಎಂದು ವಿಶ್ವಾಸ ಗಳಿಸಿಕೊಂಡಿದ್ದೀರಿ. ಬಹಳಷ್ಟು ಅಂಗಡಿಗಳಿಗೆ ಖಾಯಂ ಗಿರಾಕಿಗಳಿದ್ದಾರೆ. ಇದಲ್ಲದೇ ಹಳ್ಳಿ ಜನ ಕುಳಿತು ಮಾತನಾಡುವ ಕೇಂದ್ರ ಸ್ಥಳವೂ ಹೌದು ಹಾಗೂ ಕೆಲವೊಮ್ಮೆ ಕಿರಾಣಿ ಅಂಗಡಿಗಳಲ್ಲಿ ರಾಜಕೀಯವೂ ಹುಟ್ಟುತ್ತದೆ ನಗೆ ಚಟಾಕಿ ಹಾರಿಸಿದರು.
ಹಿರಿಯರು ಬಹಳ ಉತ್ತಮ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಯುವಕರು ಸೇರಿ ಹೊಸ ಸಂಘವನ್ನು ಕಟ್ಟಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಅವರಿಗೆ ಒಳ್ಳೆಯ ಪದಾರ್ಥ ದೊರೆಯಬೇಕು ಹಾಗೂ ನಿಮಗೆ ಲಾಭವಾಗಬೇಕು. ಲಾಭ ದೊದ್ದ ಪ್ರಾಮಾಣದಲ್ಲಿ ಮಾಡಲು ಹೋದರೆ ವ್ಯಾಪಾರ ಕಡಿಮೆಯಾಗುತ್ತದೆ. ಅಗತ್ಯವಿದ್ದಷ್ಟು ಮಾತ್ರ ಲಾಭ ಇಟ್ಟುಕೊಂಡರೆ ನಿಯಮಿತವಾಗಿ ವ್ಯಾಪಾರವಾಗುತ್ತದೆ. ಆ ನಿಟ್ಟಿನಲ್ಲಿ ಶಿಗ್ಗಾಂವಿಯ ಹಿರಿಯ ವರ್ತಕರು ಬಹಳ ಉತ್ತಮ ಹೆಸರು ಮಾಡಿದ್ದು, ಅದೇ ರೀತಿ ನೀವೂ ಕೂಡ ಇರಬೇಕು ಎಂದು ಸಲಹೆ ನೀಡಿದರು