Home ಕರಾವಳಿ ಮಳಲಿ ಮಸೀದಿ ವಿಚಾರ: ಉಭಯ ಕಡೆಯ ಮುಖಂಡರ ಸಭೆ ನಡೆಸಿದ ಶಾಸಕ ಭರತ್ ಶೆಟ್ಟಿ

ಮಳಲಿ ಮಸೀದಿ ವಿಚಾರ: ಉಭಯ ಕಡೆಯ ಮುಖಂಡರ ಸಭೆ ನಡೆಸಿದ ಶಾಸಕ ಭರತ್ ಶೆಟ್ಟಿ

ಮಂಗಳೂರು: ಮಳಲಿ‌ ಮಸೀದಿ ವಿವಾದ ಸಂಬಂಧ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದೆ.

ಮಸೀದಿ ಆಡಳಿತ ಮಂಡಳಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿ.ಎಚ್.ಪಿ, ಬಜರಂಗದಳ ಪ್ರಮುಖರ ಜೊತೆ ಸಭೆ ಭರತ್ ಶೆಟ್ಟಿ ಸಭೆ ನಡೆಸಿದ್ದಾರೆ.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸಭೆಯ ಆರಂಭದಲ್ಲಿ ಶಾಸಕ ಭರತ್ ಶೆಟ್ಟಿ, ಮಸೀದಿ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದರು. ಬಳಿಕ ಹಿಂದುತ್ವ ಸಂಘಟನೆ ಪ್ರಮುಖರ ಜೊತೆ ಸಭೆ ನಡೆಸಿದರು.

ಮೂರನೇ ಹಂತದಲ್ಲಿ ಮಸೀದಿ ಆಡಳಿತ ಮಂಡಳಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು,ವಿ.ಎಚ್.ಪಿ ಬಜರಂಗದಳ ಪ್ರಮುಖರ ಜೊತೆ ಜಂಟಿ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ ಮುಖಂಡರು, ತಮ್ಮ ತಮ್ಮ ನಿಲುವು ವ್ಯಕ್ತಪಡಿಸಿದರು.

ಸೌಹಾರ್ದಯುತವಾಗಿ ವಿವಾದ ಬಗೆಹರಿಸುವ ಬಗ್ಗೆ ಮಾತುಕತೆ ನಡೆದಿದೆ. ಇದು ಆರಂಭಿಕ ಸಭೆ. ಮುಂದೆಯೂ ಸಭೆ ನಡೆಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ ಮುಖಂಡರು ತಿಳಿಸಿದರು.

ಸಭೆಯ ಬಳಿಕ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ, ಮಳಲಿ ಮಸೀದಿ ವಿವಾದ ವಿಚಾರದಲ್ಲಿ ಎಸ್ ಡಿಪಿಐ ಮತ್ತು ಕಾಂಗ್ರೆಸ್ ಮುಖಂಡರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಎಸ್ ಡಿಪಿಐ ಅವರ ಹೇಳಿಕೆಗಳು ಅವರ   ಮನಸ್ಥಿತಿಯನ್ನು ತೋರಿಸುತ್ತದೆ. ಈ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಮಳಲಿಯಲ್ಲಿ ಶಾಂತಿ ಕದಡುವ, ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಂಘರ್ಷಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ.  ಮಳಲಿಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯದವರು ಸೌಹಾರ್ದವಾಗಿ ಬದುಕುತ್ತಿದ್ದಾರೆ.  ಮಳಲಿಯಲ್ಲಿ ಶಾಂತಿ ಕದಡುವ, ಸೌಹಾರ್ದ ಹದಗೆಡಿಸುವ ಪ್ರಯತ್ನಗಳು ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ನಿಂದ ನಡೆಯುತ್ತಿದೆ.  ವಿವಾದ ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ.  ಎರಡೂ ಸಮುದಾಯದವರನ್ನು ಕರೆಸಿ ಸಭೆ ನಡೆಸಿದ್ದೇನೆ. ಮಸೀದಿಯ ಕಮಿಟಿಯವರಿಗೂ ಈ ವಿವಾದ ಮಾತುಕತೆ ಮೂಲಕ ಬಗೆಹರಿಯ ಬೇಕೆಂಬ ಮನಸ್ಸಿದೆ. 1960 ರಲ್ಲಿ ಮಸೀದಿಗೆ ಆರ್ ಟಿ ಸಿ ಸಿಕ್ಕಿದೆ. 1920 ರಿಂದ ಆ ಮಸೀದಿಗೆ ಸರ್ಕಾರದಿಂದ ತಸ್ತಿಕ್ ನೀಡಲಾಗುತ್ತಿದೆ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ. ವಿವಾದ ಬಗೆಹರಿಸಲು ಎರಡೂ ಕಡೆಯಿಂದ ಸಕಾರಾತ್ಮಕ ಪ್ರಯತ್ನಗಳು ನಡೆಯುತ್ತಿವೆ. ನಿರ್ಬಂಧಿತ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ  ವಿವಾದಿತ ಕಟ್ಟಡ ಇರುವ ಜಾಗದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಅವಕಾಶ ಇರುವುದಿಲ್ಲ. ಮುಂದೆ ಮತ್ತಷ್ಟು ಸಭೆಗಳು ನಡೆಯಬೇಕಿವೆ ಎಂದು ಶಾಸಕ ಡಾ ಭರತ್ ಶೆಟ್ಟಿ ಹೇಳಿದರು.

 

Join Whatsapp
Exit mobile version