Home ಟಾಪ್ ಸುದ್ದಿಗಳು ಮಕರ ಸಂಕ್ರಾಂತಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಖರ್ಗೆ, ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ

ಮಕರ ಸಂಕ್ರಾಂತಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಖರ್ಗೆ, ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ

ಬೆಂಗಳೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ವರ್ಷದ ಮೊದಲ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.

ಎಲ್ಲರಿಗೂ ಸುಗ್ಗಿಯ ಹಬ್ಬವಾದ ಮಾಘಿ, ಬಿಹುವಿನ ಶುಭಾಶಯಗಳು. ನಾವು ಪ್ರಕೃತಿಯ ಸಮೃದ್ಧಿ, ಸುಗ್ಗಿಯ ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಆಚರಿಸುತ್ತೇವೆ.ಈ ಹಬ್ಬವು ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಹೆಚ್ಚಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಕರ ಸಂಕ್ರಾಂತಿ, ಪೊಂಗಲ್, ಸುಗ್ಗಿ ಹಬ್ಬ, ಮಾಘಿ, ಭೋಗಲಿ ಬಿಹು, ಖಿಚಡಿ, ಪೌಷ್ ಪರ್ವ, ಉತ್ತರಾಯಣ ಮತ್ತು ಮಕರವಿಳಕ್ಕು ಹಬ್ಬಗಳು ಪ್ರತಿಯೊಬ್ಬರ ಜೀವನದಲ್ಲಿ ಅಪರಿಮಿತ ಸಂತೋಷ ಮತ್ತು ಅನಿಯಂತ್ರಿತ ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸರ್ವರ ಕಷ್ಟಗಳನ್ನು ಕಳೆದು, ಸುಖ, ಶಾಂತಿ, ಸಮೃದ್ಧಿಯ ಹೊಸ ದಿಕ್ಕಿನೆಡೆಗೆ ಮುನ್ನಡೆಸಲಿ ಎಂದು ಆಶಿಸುತ್ತೇನೆ. ಎಳ್ಳು- ಬೆಲ್ಲದ ಜೊತೆ ಪ್ರೀತಿ, ಬಾಂಧವ್ಯ ಮಿಳಿತಗೊಳ್ಳಲಿ, ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಶಾಶ್ವತವಾಗಿ ಮನೆಮಾಡಲಿ. ನಾಡಬಂಧುಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ ಪೋಸ್ಟ್‌ ಮಾಡಿದ್ದಾರೆ.

ನಾಡಿನ ಸಮಸ್ತರಿಗೂ ಸುಗ್ಗಿ ಹಬ್ಬ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.‌ ಅನ್ನದಾತನ ಕಷ್ಟಕ್ಕೆ ಹೆಗಲು ನೀಡುವ ರಾಸುಗಳನ್ನು ಪೂಜಿಸುವ ಹಾಗೂ ಕಿಚ್ಚು ಹಾಯಿಸುವ ಮೂಲಕ ಪ್ರಾಣಿಗಳಲ್ಲೂ ದೇವರನ್ನು ಕಾಣುವ ವಿಶೇಷ ಹಬ್ಬವಿದು. ಸುಗ್ಗಿ ಹಬ್ಬವು ನಾಡಿನ ಸಮಸ್ತರಿಗೂ ವಿಶೇಷವಾಗಿ ರೈತ ಬಾಂಧವರ ಬದುಕಿನಲ್ಲಿ ಸುಖ, ಸಂತೋಷ ಹಾಗೂ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಹಾರೈಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಬ್ಬಕ್ಕೆ ಶುಭ ಕೋರಿದ್ದಾರೆ.

‌ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ರೈತ ಕಾಯಕದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

Join Whatsapp
Exit mobile version