ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಮೋಕ್ಷ ಮಾಡಬೇಕೆಂಬ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಅಪರಾಹ್ನ ಬಂಧಿಸಿದ್ದಾರೆ.
ಕೇಂದ್ರ ಸಚಿವ ರಾಣೆ ಅವರ ಹೇಳಿಕೆಯನ್ನು ವಿರೋಧಿಸಿ ಶಿವಸೇನೆ ಇಂದು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ. ರಾಣೆ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ ಶಿವಸೇನೆ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಘಟನಾ ಸಂಬಂಧ ನಾಗಪುರದ ಬಿಜೆಪಿ ಕಚೇರಿ ಸೇರಿದಂತೆ ಅಲ್ಲಲ್ಲಿ ಕಲ್ಲು ತೂರಾಟವಾದ ಘಟನೆ ವರದಿಯಾಗಿದೆ. ಮಾತ್ರವಲ್ಲದೆ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರು ಬೀದಿಯಲ್ಲಿ ಹೊಡೆದಾಡಿದ ಘಟನೆ ಕೂಡ ನಡೆದಿದೆ.
ಈ ಮಧ್ಯೆ ಪ್ರಧಾನಿ ಮೋದಿ ಪತ್ರ ಬರೆದ ಶಿವಸೇನೆ, ನಾರಾಯಣ್ ರಾಣೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಚಿಪ್ಲುನ್ ನಲ್ಲಿ ಬಂಧಿಸಿದ್ದಾರೆ.