ಮುಂಬೈ: ಜಮ್ಮು ಕಾಶ್ಮೀರದ ಪರಿಸ್ಥಿತಿ ಸಾಕಷ್ಟು ಅಸ್ಥಿರವಾಗಿದ್ದು, ಅಲ್ಲಿನ ಕಾಶ್ಮೀರಿ ಪಂಡಿತರು ತುಂಬಾ ನೋವು ಅನುಭವಿಸಿತ್ತಿದ್ದಾರೆ. ನಾವು ಕಾಶ್ಮೀರಿ ಪಂಡಿತರನ್ನು ಬೆಂಬಲಿಸುತ್ತೇವೆ. ಅವರಿಗೆ ನಮ್ಮ ರಾಜ್ಯದ ಬಾಗಿಲು ಸದಾ ತೆರೆದಿರುತ್ತದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಶ್ಮೀರದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಅಲ್ಲಿನ ಪಂಡಿತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಮಧ್ಯೆ ಕಾಶ್ಮೀರದ ವಿಚಾರವಾಗಿ ಬಿಜೆಪಿಯನ್ನು ಟೀಕೆ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “1990 ರ ಯುಗ ಮತ್ತೆ ಬಂದಿದೆ. ಅವರ ಬಳಿ ಯಾವುದೇ ಯೋಜನೆಗಳಿಲ್ಲ. ಕಣಿವೆಯಲ್ಲಿ ಕೊಲೆಯಾದಾಗಲೆಲ್ಲ ಗೃಹ ಸಚಿವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ ಎಂಬ ಸುದ್ದಿ ಬರುತ್ತದೆ. ಈ ಸಭೆಗಳು ಸಾಕು, ಈಗ ನಮಗೆ ಕ್ರಮ ಬೇಕು” ಎಂದು ಕಿಡಿಕಾರಿದ್ದಾರೆ.