ಮುಂಬೈ: ಪತನದಂಚಿನಲ್ಲಿರುವ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರ್ಕಾರವು ವಿಸರ್ಜಿಸುವ ಹಂತಕ್ಕೆ ಬಂದಿದೆ. ಇದೀಗ ಶಿವಸೇನೆಯು ತನ್ನ ಬಂಡಾಯ ಶಾಸಕರಿಗೆ ಸಂಜೆ ಐದು ಗಂಟೆಯೊಳಗೆ ಮುಂಬೈನಲ್ಲಿ ನಡೆಯುವ ಸಭೆಗೆ ಹಾಜರಾಗುವಂತೆ ಗಡುವು ನೀಡಿದೆ. ಹಾಜರಾಗದಿದ್ದಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ಸಂಜೆ ನಡೆಯುವ ಸಭೆಗೆ ನೀವು ಹಾಜರಾಗದಿದ್ದಲ್ಲಿ ನೀವು ಪಕ್ಷವನ್ನು ತೊರೆಯುವ ಉದ್ದೇಶವನ್ನು ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ, ನಿಮ್ಮ ಸದಸ್ಯತ್ವವನ್ನೂ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆಯ ಸಂದೇಶವನ್ನು ಬಂಡಾಯ ಶಾಸಕರಿಗೆ ಶಿವಸೇನೆ ಪತ್ರದ ಮೂಲಕ ರವಾನಿಸಿದೆ.
ಶಿವಸೇನೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದಲ್ಲಿ ನಡೆಯುವ ಸಭೆಗೆ ಹಾಜರಾಗುವಂತೆ ವಾಟ್ಸಾಪ್, ಇಮೇಲ್, ಮತ್ತು ಎಸ್ ಎಂಎಸ್ ಮೂಲಕ ಪತ್ರ ಕಳುಹಿಸಲಾಗಿದೆ. ಕೊರೊನಾ ಪಾಸಿಟಿವ್ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎನ್ನಲಾಗಿದೆ