ಮುಂಬೈ: ಕಳೆದ ಎರಡು ವರ್ಷಗಳಲ್ಲಿ ಲಾಕ್ ಡೌನ್ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣಗಳನ್ನು ಹೆಚ್ಚಾಗಿ ದಾಖಲಿಸಲಾಗಿದೆ ಮತ್ತು ಪ್ರಸ್ತಾವನೆಯನ್ನು ಅನುಮೋದನೆಗಾಗಿ ರಾಜ್ಯ ಸಚಿವ ಸಂಪುಟದ ಮುಂದೆ ಇಡಲಾಗುವುದು. ಸಚಿವ ಸಂಪುಟದ ಒಪ್ಪಿಗೆಯ ನಂತರ, ರಾಜ್ಯಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ-ಪಾಟೀಲ್ ಹೇಳಿದ್ದಾರೆ.
ಅನಗತ್ಯವಾಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಮಂದಿಗೆ ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರ ಸಮಾಧಾನ ತಂದಿದೆ.