ಬೆಂಗಳೂರು : ‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿ ಪ್ರಸಾರ ಮಾಡದಂತೆ ಕೆಲವು ದುಷ್ಕರ್ಮಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ವಾಹಿನಿಯ ಬ್ಯುಸಿನೆಸ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಈ ಕುರಿತು ಇಂದು ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅದರ ಸ್ಕ್ರೀನ್ ಶಾಟ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ರಾಘವೇಂದ್ರ ಹುಣಸೂರು ಅವರು ಈ ಪೋಸ್ಟ್ ಪ್ರಕಟಿಸುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಸಂದೇಶಗಳು ಮತ್ತು ಮಧ್ಯರಾತ್ರಿ ಕರೆಗಳು ಬರುತ್ತಿವೆ. ಇವೆಲ್ಲಾ ಬೆದರಿಕೆಯಂತೆ ಕಂಡುಬರುತ್ತಿದ್ದರೂ, ನಾವು ಅದಕ್ಕೆಲ್ಲ ಹೆದರೋದಿಲ್ಲ. ಮಹಾನಾಯಕ ಮುಂದುವರಿಯುತ್ತದೆ. ‘ಇದು ನಮ್ಮ ಹೆಮ್ಮೆ’ ಎಂದು ನಾವು ಹೇಳುತ್ತಲೇ ಇರುತ್ತೇವೆ. ಅಲ್ಲದೆ, ಇದು ನನ್ನ ವೈಯಕ್ತಿಕ ಪ್ರೀತಿಯೂ ಹೌದು. ಇದು ಸಮಾಜಕ್ಕೆ ಸಮಸ್ಯೆ ಎಂದು ಯಾರಾದರೂ ಭಾವಿಸಿದರೆ, ನಿಜವಾಗಿಯೂ ಸಮಾಜಕ್ಕೆ ನೀವು ಸಮಸ್ಯೆಯಾಗಿದ್ದೀರಿ. ಬೇಗ ಹುಶಾರಾಗಿ…’’ ಎಂದು ರಾಘವೇಂದ್ರ ಹುಣಸೂರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಹುಣಸೂರು ಅವರ ಪೋಸ್ಟ್ ಗೆ ನೂರಾರು ಮಂದಿಯಿಂದ ವ್ಯಕ್ತವಾಗಿದ್ದು, ಬೆಂಬಲ ವ್ಯಕ್ತಪಡಿಸಿ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ 2,800ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.
‘ಜೀ ಕನ್ನಡ’ ಇತ್ತೀಚೆಗೆ ‘ಮಹಾನಾಯಕ’ ಧಾರಾವಾಹಿ ಪ್ರಸಾರ ಮಾಡಲು ಆರಂಭಿಸಿದ್ದು, ಧಾರಾವಾಹಿಗೆ ಕನ್ನಡಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮುಂಚೂಣಿಯಲ್ಲಿರುವ ಧಾರಾವಾಹಿಗಳಲ್ಲಿ ‘ಮಹಾನಾಯಕ’ ಕೂಡ ಒಂದು. ಜೀ ಕನ್ನಡ ವಾಹಿನಿಯ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿ, ರಾಜ್ಯದಾದ್ಯಂತ ಕನ್ನಡಿಗರು ಫ್ಲೆಕ್ಸ್ ಗಳನ್ನು ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಿರುವವರ ಪ್ರಬುದ್ಧ ನಟನೆಗೆ ಪ್ರೀತಿ – ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಕಡೆಗಳಲ್ಲಿ ಜೀ ಕನ್ನಡ ಮತ್ತು ರಾಘವೇಂದ್ರ ಹುಣಸೂರು ಅವರನ್ನು ಅಭಿನಂದಿಸಿ ಕಾರ್ಯಕ್ರಮಗಳೂ ನಡೆದಿವೆ. ಧಾರಾವಾಹಿಯ ವೀಡಿಯೊ ಪ್ರಮೋಗಳೇ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿಯಿಂದ ವೀಕ್ಷಿಸಲ್ಪಡುತ್ತಿದೆ. ಧಾರಾವಾಹಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ ‘ಜೀ ಕನ್ನಡ’ದಲ್ಲಿ ಪ್ರಸಾರವಾಗುತ್ತದೆ.