Home ಟಾಪ್ ಸುದ್ದಿಗಳು ಮಹಾ ಬಿಕ್ಕಟ್ಟು: ಮುಂಬೈಗೆ ಬಾರದೆ ಗೋವಾದಲ್ಲೇ ಉಳಿದ ಬಂಡಾಯಗಾರರು

ಮಹಾ ಬಿಕ್ಕಟ್ಟು: ಮುಂಬೈಗೆ ಬಾರದೆ ಗೋವಾದಲ್ಲೇ ಉಳಿದ ಬಂಡಾಯಗಾರರು

►ಶಿವಸೇನೆ ಅಧಿಕಾರಕ್ಕಾಗಿ ಹುಟ್ಟಿಲ್ಲ; ಅಧಿಕಾರ ಶಿವಸೇನೆಗಾಗಿ ಹುಟ್ಟಿದೆ ಎಂದ ಸಂಜಯ್ ರಾವುತ್

ಮುಂಬೈ: ಗುರುವಾರ ಸದನದಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದ ಬೆನ್ನಲ್ಲೇ ಶಿವಸೇನೆ ಬಂಡಾಯ ಶಾಸಕರು ರಾತ್ರಿಯೇ ಗೋವಾಕ್ಕೆ ಬಂದಿದ್ದಾರೆ. ಜೂನ್ 30ರ ಬೆಳಿಗ್ಗೆ ಮುಂಬಯಿಗೆ ಬರುವ ಯೋಜನೆ ಇತ್ತು. ಆದರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಬುಧವಾರವೇ ರಾಜೀನಾಮೆ ನೀಡಿದ್ದರಿಂದ ಬಂಡಾಯಗಾರರು ಗೋವಾದಲ್ಲೇ ಉಳಿದು ಬಿಟ್ಟಿದ್ದಾರೆ.

ನಾವು ಇನ್ನೂ ಬಿಜೆಪಿಯವರ ಜೊತೆಗೆ ಮಂತ್ರಿ ಸ್ಥಾನಗಳ ಬಗ್ಗೆ ಮಾತನಾಡಿಲ್ಲ; ಗಾಳಿ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿರುವ ಏಕನಾಥ ಶಿಂಧೆ ಮುಂಬೈಗೆ ಬರುವುದು ಸದ್ಯಕ್ಕೆ ಮುಂದಕ್ಕೆ ಹೋಗಿದೆ ಎಂದು ಪಣಜಿಯಲ್ಲಿ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಸರಕಾರ ರಚಿಸುವ ಬಗ್ಗೆ ನಮ್ಮ ಶಾಸಕಾಂಗ ಪಕ್ಷ ನಿರ್ಣಯಿಸುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯೂ ಇಂದು ನಡೆಯುತ್ತಿದೆ. ಮಹಾರಾಷ್ಟ್ರದ ಉಸ್ತುವಾರಿ ಹೊತ್ತಿರುವ ಸಿ. ಟಿ. ರವಿ ಇಲ್ಲೇ ಬೀಡು ಬಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಅವರು ಹಿರಿಯ ನಾಯಕರು ಸರಕಾರ ರಚಿಸುವ ಬಗೆಗೆ ತೀರ್ಮಾನಿಸುವರು ಎಂದು ಪ್ರತಿಕ್ರಿಯಿಸಿದ್ದಾರೆ.

‘ಶಿವಸೇನೆ ಅಧಿಕಾರಕ್ಕಾಗಿ ಹುಟ್ಟಿಲ್ಲ; ಅಧಿಕಾರ ಶಿವಸೇನೆಗಾಗಿ ಹುಟ್ಟಿದೆ’ ಎಂಬ ಬಾಳಾ ಠಾಕ್ರೆಯವರ ಮಂತ್ರವನ್ನು ಮತ್ತೆ ನೆನಪಿಸಿದ ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಶಿವಸೇನೆ ಮತ್ತೆ ತನ್ನ ಸ್ವಂತ ಬಲದಿಂದಲೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಉದ್ಧವ್ ರಾಜೀನಾಮೆ ನೀಡಿದ ಕ್ಷಣದಿಂದಲೂ ಬಿಜೆಪಿ ಶಾಸಕರು ದಕ್ಷಿಣ ಮುಂಬೈಯ ತಾರಾ ಹೋಟೆಲೊಂದರಲ್ಲಿ ಓಡಾಡುತ್ತಲೇ ಇದ್ದಾರೆ. ಫಡ್ನವೀಸ್ ಕೈಗೆ ಮತ್ತೆ ಅಧಿಕಾರ ಕೊಡಲು ಮೇಲ್ಜಾತಿ ರಾಜಕೀಯ ತೀವ್ರವಾಗಿ ನಡೆಯುತ್ತಿರುವುದಾಗಿ ವರದಿಯಾಗಿದೆ.

Join Whatsapp
Exit mobile version