ಮುಂಬೈ : ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಬಂಧಿತನಾಗಿರುವ ‘ರಿಪಬ್ಲಿಕ್ ಟಿವಿ’ ಸಂಪಾದಕ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಸಭ್ಯತೆ ಪ್ರದರ್ಶಿಸುವಂತೆ ಆಲಿಬಾಗ್ ಕೋರ್ಟ್ ಮುಖ್ಯ ಮ್ಯಾಜಿಸ್ಟ್ರೇಟರು ಸೂಚಿಸಿದ್ದ ಘಟನೆ ವರದಿಯಾಗಿದೆ. “ಆರೋಪಿ ರೀತಿ ವರ್ತಿಸಿ, ವಿಚಾರಣಾ ಪ್ರಕ್ರಿಯೆಗೆ ಅಡ್ಡಿಪಡಿಸಬೇಡಿ’’ ಎಂದು ತರಾಟೆಗೆ ತೆಗೆದುಕೊಂಡಿದ್ದರು ಎಂದೂ ತಿಳಿದುಬಂದಿದೆ.
ಇಂಟಿರಿಯರ್ ವಿನ್ಯಾಸಕಾರ ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಗೋಸ್ವಾಮಿಯನ್ನು, ಅಂದು ಸಂಜೆ ಆಲಿಬಾಗ್ ಮುಖ್ಯ ಮ್ಯಾಜಿಸ್ಟ್ರೇಟ್ ಸುನೈನಾ ಪಿಂಗಳೆ ಸಮ್ಮಿಖದಲ್ಲಿ ಹಾಜರು ಪಡಿಸಲಾಗಿತ್ತು. ಈ ವೇಳೆ ಈ ಘಟನೆ ನಡೆದಿದೆ. ರಾತ್ರಿ 11:30ರ ವೇಳೆಗೆ ಕೋರ್ಟ್ ಆದೇಶ ನೀಡಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.
ಗೋಸ್ವಾಮಿಗೆ ತನ್ನ ಗಾಯವನ್ನು ತೋರಿಸಲು ಕೋವಿಡ್ ತಡೆ ಉದ್ದೇಶದಿಂದ ನಿರ್ಮಿಸಲಾದ ಪ್ಲಾಸ್ಟಿಕ್ ಪಾರ್ಟಿಶನ್ ನಿಂದ ಎದ್ದು ನಿಲ್ಲಲು ಸೂಚಿಸಿದಾಗ, ಆತ ನ್ಯಾಯಾಧೀಶರ ಮುಂದಿನ ವೇದಿಕೆ ಹತ್ತಲು ಯತ್ನಿಸಿದ್ದ. ನಂತರ ಆತನ ನ್ಯಾಯವಾದಿ ಪ್ರಕರಣದ ಕುರಿತು ವಿವರಿಸುತ್ತಿದ್ದಾಗ ಮತ್ತೆ ಧ್ವನಿ ಏರಿಸಿ, ಕೈಬೀಸಿ ತನ್ನ ಗಾಯವನ್ನು ತೋರಿಸಲು ಯತ್ನಿಸಿದ. ಆ ನಂತರ ವೈದ್ಯಾಧಿಕಾರಿಯ ವಿಚಾರಣೆ ನಡೆಯುತ್ತಿದ್ದಾಗ, ವೈದ್ಯರು ಸುಳ್ಳು ಹೇಳುತ್ತಿದ್ದಾರೆ ಎಂದು ಗೋಸ್ವಾಮಿ ಕಿರುಚಿದ ಎನ್ನಲಾಗಿದೆ.
ಆಗ ನ್ಯಾಯಾಧೀಶರು ಗೋಸ್ವಾಮಿಗೆ ಎಚ್ಚರಿಕೆ ನೀಡಿ, ತಮ್ಮನ್ನು ಕೋರ್ಟ್ ರೂಂನಿಂದ ಹೊರಗೆ ಕಳುಹಿಸಬೇಕಾದೀತು ಎಂದು ಹೇಳಿದರು. ಆ ನಂತರ ಗೊಸ್ವಾಮಿ ಮೌನವಾದ ಎಂದು ವರದಿಯಾಗಿದೆ.
ಕೋರ್ಟ್ ಪ್ರಕ್ರಿಯೆಯ ಧ್ವನಿಮುದ್ರಿಕೆ ಮಾಡಿದ್ದ ಗೋಸ್ವಾಮಿಯ ಪತ್ನಿ ಸಮ್ಯಬ್ರತಗೂ ನ್ಯಾಯಾಧೀಶರು ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಇದೇ ವೇಳೆ ಕೋರ್ಟ್ ರೂಂನಲ್ಲಿ ಹಾಜರಿದ್ದು, ವಿಚಾರಣಾ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದ ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ಅವರನ್ನು ಕೋರ್ಟ್ ರೂಂನಿಂದ ಹೊರಹೋಗುವಂತೆ ನ್ಯಾಯಾಧೀಶರು ಆದೇಶಿಸಿದ್ದರು ಮತ್ತು ಪೊಲೀಸರು ಅವರನ್ನು ಹೊರಗೆ ಕರೆದೊಯ್ದರು ಎಂದು ವರದಿಯಾಗಿದೆ.
ಆದೇಶ ಹೊರಬೀಳುತ್ತಿದ್ದಂತೆ, ಗೋಸ್ವಾಮಿ ಕೋಲ್ಡ್ ಡ್ರಿಂಕ್ ಕುಡಿಯಲು ನೋಡಿದ್ದ, ಆಗ ಪೊಲೀಸ್ ಸಿಬ್ಬಂದಿಯೊಬ್ಬರು ಆತನನ್ನು ಕೋರ್ಟ್ ರೂಂನಿಂದ ಹೊರಹೋಗುವಂತೆ ಸೂಚಿಸಿದ್ದುದೂ ನಡೆದಿತ್ತು.
ಆಲಿಬಾಗ್ ನಲ್ಲಿ ಮಧ್ಯಾಹ್ನ ಬಿಜೆಪಿಯ ಮಾಜಿ ಸಂಸದ ಕಿರಿತ್ ಸೊಮಯ್ಯ ಬಂದು ಗೋಸ್ವಾಮಿಯನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ, ಪೊಲೀಸರು ಅವಕಾಶ ನೀಡಿರಲಿಲ್ಲ ಎಂದು ತಿಳಿದುಬಂದಿದೆ.