ಮಡಿಕೇರಿ ನಗರಸಭೆ ಚುನಾವಣೆಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) 8 ವಾರ್ಡ್ ಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
3ನೇ ವಾರ್ಡ್ ತ್ಯಾಗರಾಜ ಕಾಲೊನಿಯಿಂದ ಮೇರಿ ವೇಗಸ್, 4ನೇ ವಾರ್ಡ್ ಆಝಾದ್ ನಗರದಿಂದ ಮನ್ಸೂರ್ ಅಲಿ, 7ನೇ ವಾರ್ಡ್ ಗಣಪತಿ ಬೀದಿಯಿಂದ ಅಮೀನ್ ಮೊಹ್ಸಿನ್, 8ನೇ ವಾರ್ಡ್ ಮಹದೇವ ಪೇಟೆಯಿಂದ ನಬೀಸ ಅಕ್ಬರ್, 9ನೇ ವಾರ್ಡ್ ಮಲ್ಲಿಕಾರ್ಜುನ ನಗರದಿಂದ ರಝಿಯಾ ರಫೀಕ್, 10ನೇ ವಾರ್ಡ್ ಪ್ರಗತಿ ಲೇ ಔಟ್ ನಿಂದ ಅಬ್ದುಲ್ ಅಡ್ಕರ್, 11ನೇ ವಾರ್ಡ್ ಮಕನ್ ಗಲ್ಲಿ, ಹಿಲ್ ರೋಡ್ ನಿಂದ ನೀಮ ಹರ್ಷದ್, 12ನೇ ವಾರ್ಡ್ ದಾಸವಾಳ ರಸ್ತೆಯಿಂದ ಬಷೀರ್ ಸ್ಪರ್ಧಿಸಲಿದ್ದಾರೆ.
ನಗರದ ಕಮ್ಯೂನಿಟಿ ಹಾಲ್ ನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ, ಈಗ ಬೇರೆ ಪಕ್ಷಗಳು SDPI ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಕಾಯುತ್ತಿರುವುದು ಪಕ್ಷದ ಗೆಲುವಿಗೆ ಸಾಕ್ಷಿಯಾಗಿದೆ. SDPI ಅಭ್ಯರ್ಥಿಗಳು ನಗರ ಸಭೆ ಸದಸ್ಯರಾದ ಸಂದರ್ಭ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸ ತ್ವರಿತವಾಗಿ ನಡೆಯುತ್ತಿತ್ತು. ಪಕ್ಷವು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆದ್ಯತೆ ನೀಡಿದೆ. ಈ ಬಾರಿ ಚುನಾವಣೆಯಲ್ಲಿ 10ರಿಂದ 15 ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಪಕ್ಷದ ಸದಸ್ಯರು ಅಧ್ಯಕ್ಷರಾಗುವುದು ನಿಷ್ಚಿತ. ಇದರಿಂದ ಮಡಿಕೇರಿ ನಗರ ಸರ್ವಾಂಗೀಣ ಅಭಿವೃದ್ಧಿಗೆ ಸಾಧ್ಯವಾಗುತ್ತದೆ. SDPI ಕೇವಲ ಚುನಾವಣಾ ರಾಜಕೀಯ ಮಾಡುವುದಿಲ್ಲ. ಹೋರಾಟದ ರಾಜಕೀಯವನ್ನು ರಾಷ್ಟ್ರದಲ್ಲಿ ಪರಿಚಯಿಸಿದ್ದೇವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು,ಮುಂದಿನ ಹಂತದಲ್ಲಿ ಇನ್ನುಳಿದ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ತಿಳಿಸಿದರು.
SDPI ಜಿಲ್ಲಾಧ್ಯಕ್ಷ ಮನ್ಸೂರ್ ಅಲಿ ಮಾತನಾಡಿ, ಬಡವರ ಶೋಷಿತರ ಧ್ವನಿಯಾಗಿ 2009ರಲ್ಲಿ ಪಕ್ಷ ಸ್ಥಾಪನೆಯಾಯಿತು. ಪಕ್ಷವು ತನ್ನ ಧ್ಯೇಯ, ಉದ್ದೇಶದಂತೆ ಕಾರ್ಯೋನ್ಮುಖಗೊಂಡಿದೆ. ಕಳೆದ ನಗರಸಭಾ ಚುನಾವಣೆಯಲ್ಲಿ 8 ಅಭ್ಯರ್ಥಿಗಳ ಪೈಕಿ 4 ಅಭ್ಯರ್ಥಿಗಳು ಗೆಲುವು ಸಾಧಿಸಿ ಸಾಮಾಜಿಕ ಕೆಲಸ ಮಾಡಿದ್ದರು. ಅಭಿವೃದ್ಧಿ ಜೊತೆಗೆ ಸಮಾನತೆಗಾಗಿ ಹೋರಾಡಿದ್ದಾರೆ. ವಿಪತ್ತು, ಕೋವಿಡ್ ಪರಿಸ್ಥಿತಿಯಲ್ಲಿ ಕಾರ್ಯಕರ್ತರು ಸಮಾಜಮುಖಿಯಾಗಿ ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಮಹಮ್ಮದ್ ಶಫಿ, ನಗರಾಧ್ಯಕ್ಷ ಕಲೀಲ್ ಪಾಶ, ಉಪಾಧ್ಯಕ್ಷ ಮೈಕಲ್ ವೇಗಸ್, ನಗರಸಭಾ ಚುನಾವಣಾ ಉಸ್ತುವಾರಿ ಮುಸ್ತಫಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.