Home ಟಾಪ್ ಸುದ್ದಿಗಳು ಮಡಿಕೇರಿ: ಮಳೆ ಹಾನಿ ಪ್ರದೇಶಕ್ಕೆ ಶಾಸಕರ ಭೇಟಿ; ಪರಿಹಾರ ಚೆಕ್ ವಿತರಣೆ

ಮಡಿಕೇರಿ: ಮಳೆ ಹಾನಿ ಪ್ರದೇಶಕ್ಕೆ ಶಾಸಕರ ಭೇಟಿ; ಪರಿಹಾರ ಚೆಕ್ ವಿತರಣೆ

ಕೊಡಗು:  ಜಿಲ್ಲೆಯಲ್ಲಿ  ಮತ್ತೆ ಧಾರಾಕಾರ ಮಳೆಯಾಗುತ್ತಿದ್ದು,  ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಿಂದಾಗಿ ಕೊಯನಾಡು ಬಳಿಯ ಕಿಂಡಿ ಅಣೆಕಟ್ಟು ಬಳಿ ಮರದ ದಿಮ್ಮಿಗಳು ಸೇತುವೆಗೆ ಅಡ್ಡಲಾಗಿ ಬಂದ ಪರಿಣಾಮ ನದಿಯ ನೀರು ಉಕ್ಕಿ 5 ಮನೆಗಳಿಗೆ ಹಾನಿಯಾಗಿದೆ.

ಮಳೆ ಹಾನಿ ಪ್ರದೇಶಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಭೇಟಿ ನೀಡಿ ಪರಿಶೀಲಿಸಿದರು. ಆಗಸ್ಟ್ ಮೊದಲ ವಾರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅವರು ಹೇಳಿದರು.

ಈ 5 ಮನೆಗಳಲ್ಲಿ ಸಂಪಾಜೆ ಬಳಿಯ ಒಂದು ಮನೆಗೆ ಹೆಚ್ಚಿನ ಹಾನಿಯಾಗಿದ್ದು, 4 ಮನೆಗಳು ಸಾಧಾರಣ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ  5 ಕುಟುಂಬಗಳ 21 ಜನರನ್ನು ಕೊಯನಾಡು ದೇವಸ್ಥಾನ ಕಲಾ ಮಂದಿರ  (ಪರಿಹಾರ ಕೇಂದ್ರ)ಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಂದಾಯ ನಿರೀಕ್ಷಕರಾದ ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.

ಈ ವೇಳೆ ಉಪ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಸ್ಥಳದಲ್ಲಿ ಹಾಜರಿದ್ದು, ಸಂತ್ರಸ್ತ ಕುಟುಂಬ ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ಶಾಸಕರಾದ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರು ಸ್ಥಳಕ್ಕೆ ಖುದ್ದು ಹಾಜರಾಗಿ ಕಿಂಡಿ ಅಣೆಕಟ್ಟಿನ ಮುಂಭಾಗದಲ್ಲಿ ಅಡ್ಡಲಾಗಿ ಬಿದ್ದಿರುವ ಮರದ ದಿಮ್ಮಿಗಳನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಕಿಂಡಿ ಅಣೆಕಟ್ಟಿನ ಎರಡು ಬದಿಗಳಲ್ಲಿ 5 ಅಡಿ ಎತ್ತರಕ್ಕೆ ತಡೆ ಗೋಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು. ನಂತರ ಕೊಯನಾಡುವಿನ 5 ಕುಟುಂಬಗಳು, ಸಂಪಾಜೆ ಗ್ರಾಮದ 2 ಕುಟುಂಬಗಳಿಗೆ ಹಾಗೂ ಚೆಂಬು ಗ್ರಾಮದ ಎರಡು ಕುಟುಂಬಗಳಿಗೆ ಪರಿಹಾರವಾಗಿ ರೂ.10 ಸಾವಿರಗಳ ಚೆಕ್ ವಿತರಿಸಿದರು.

ಕೊಯನಾಡಿನಲ್ಲಿ ಇರುವ ಶ್ರೀ ಗಣಪತಿ ದೇವಸ್ಥಾನದ ಕಲಾ ಮಂದಿರದಲ್ಲಿ ಕಾಳಜಿ ಕೇಂದ್ರ ತೆರೆದು ಸಂತ್ರಸ್ತರಿಗೆ ಊಟೋಪಚಾರ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಸಂದರ್ಭದಲ್ಲಿ ಸಂಪಾಜೆ ಹೋಬಳಿ ನೋಡೆಲ್ ಅಧಿಕಾರಿ, ಉಪ ತಹಶೀಲ್ದಾರರು, ಸಂಪಾಜೆ ಹೋಬಳಿ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಸಹಾಯಕರು ಇದ್ದರು.

Join Whatsapp
Exit mobile version