Home ಟಾಪ್ ಸುದ್ದಿಗಳು ಮಡಿಕೇರಿ: ಕೊಲೆಯಾಗಿ 18 ವರ್ಷಗಳ ಬಳಿಕ ಮಣ್ಣಿನಲ್ಲಿ ದಫನವಾದ ಸಫಿಯಾ..!

ಮಡಿಕೇರಿ: ಕೊಲೆಯಾಗಿ 18 ವರ್ಷಗಳ ಬಳಿಕ ಮಣ್ಣಿನಲ್ಲಿ ದಫನವಾದ ಸಫಿಯಾ..!

►ಇಡೀ ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪ್ರಕರಣ


ಮಡಿಕೇರಿ : 18 ವರ್ಷಗಳ ಹಿಂದೆ ತನ್ನ 13ನೇ ವಯಸ್ಸಿನಲ್ಲಿ ತಾನು ಕೆಲಸಕ್ಕಿದ್ದ ಮನೆ ಮಾಲಕನಿಂದ ಕೊಲೆಯಾಗಿದ್ದ ಬಾಲಕಿಯ ಅಸ್ಥಿ ಪಂಜರವನ್ನು ಸೋಮವಾರ ಇಸ್ಲಾಂ ಪದ್ದತಿಯಂತೆ ಹುಟ್ಟೂರಿನಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.


ಸಫಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡು ಜಿಲ್ಲಾ ನ್ಯಾಯಾಲಯ ನ.6ರಂದು ಸಫಿಯಾಳ ಅಸ್ಥಿ ಪಂಜರಗಳನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸುವಂತೆ ಮಹತ್ವದ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕೊಚ್ಚಿ ವಿಧಿವಿಜ್ಞಾನ ಪ್ರಯೋಗಾಲಯದಿಂದ ಅಸ್ಥಿ ಪಂಜರವನ್ನು ಪಡೆದುಕೊಂಡು ಸಂಜೆ ವೇಳೆಗೆ ಗ್ರಾಮಕ್ಕೆ ತರಲಾಯಿತು. ಅಯ್ಯಂಗೇರಿ ಹಳೇ ಮಸೀದಿಯಲ್ಲಿ ಸಫಿಯಾ ಅಸ್ಥಿ ಪಂಜರವನ್ನಿಟ್ಟು ಧರ್ಮ ಗುರುಗಳಾದ ಉಸ್ಮಾನ್ ಮರ್ಝೂಕಿ ಪ್ರಾರ್ಥನೆ ನೆರವೇರಿಸಿದರು.


ಗೋವಾದಲ್ಲಿ ಗುತ್ತಿಗೆದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಸರಗೋಡಿನ ಮುಳಿಯಾರ್ ನಿವಾಸಿ ಕೆ.ಸಿ. ಹಂಝ ಎಂಬವರ ಮನೆಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಅಯ್ಯಂಗೇರಿ ನಿವಾಸಿ ಸಫಿಯಾ ಕೆಲಸಕ್ಕಿದ್ದಳು.

ಮನೆಗೆಲಸ ಮಾಡುತ್ತಿದ್ದ ಸಫಿಯಾಳಿಗೆ ಕೆಲಸದ ನಡುವೆ ಸುಟ್ಟ ಗಾಯಗಳಾಗಿತ್ತು. ಈ ವಿಚಾರ ಹೊರಗೆ ತಿಳಿಯುವುದು ಬೇಡ ಎಂದು ಕೊಲೆಗೈದು ಹಲವು ತುಂಡುಗಳನ್ನಾಗಿ ಮಾಡಿ ಹೂತು ಹಾಕಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿತ್ತು. 2008ರ ಜೂ.5ರಂದು ಗೋವಾದ ಅಣೆಕಟ್ಟಿನ ಬಳಿ ಈ ಮೂಳೆಗಳು ಪತ್ತೆಯಾಗಿದ್ದವು.


ಪ್ರಕರಣದ ಒಂದನೇ ಆರೋಪಿ ಹಂಝಾಗೆ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಆದರೆ ನಂತರ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು.
ಹಂಝಾ ಅಲ್ಲದೆ ಆತನ ಪತ್ನಿ ಮೈಮುನಾ ಕೂಡ ಆರೋಪಿಯಾಗಿದ್ದಾರೆ.


ಚಾರ್ಜ್ ಶೀಟ್ ಜೊತೆಗೆ ತಲೆಬುರುಡೆ ಸೇರಿದಂತೆ ಭಾಗಗಳನ್ನು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.


ಆದರೆ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮಗಳ ಅಂತ್ಯಸಂಸ್ಕಾರ ಮಾಡಬೇಕೆಂದು ಕೋರಿ ಪೋಷಕರು ಕಳೆದ ತಿಂಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.


ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ಶುಕೂರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಾನು ಎಸ್. ಪಣಿಕರ್ ದೇಹದ ಭಾಗಗಳನ್ನು ಪೋಷಕರಿಗೆ ಒಪ್ಪಿಸುವಂತೆ ಆದೇಶಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ ಸಫಿಯಾ ಪೋಷಕರು ಮಗಳ ದೇಹಾವಶೇಷಗಳನ್ನು ಸ್ವೀಕರಿಸಿದರು.

Join Whatsapp
Exit mobile version